ಸ್ಟೋನ್​ ಕ್ರಷರ್​​​ 
ನ್ಯೂಸ್

ಸರ್ಕಾರದ ಭರವಸೆ ಹಿನ್ನೆಲೆ: ಸ್ಟೋನ್ ಕ್ರಷರ್ ಮಾಲೀಕರಿಂದ ಪ್ರತಿಭಟನೆ ವಾಪಸ್- Stone Crusher Owners called off protest

ಬೆಂಗಳೂರು: ರಾಜ್ಯ ಸರ್ಕಾರ ನೀಡಿದ ಭರವಸೆ ಮೇರೆಗೆ ರಾಜ್ಯ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟ, (Stone crusher owners withdraw protest) ಪ್ರತಿಭಟನೆ ಹಿಂಪಡೆದಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ವಿದೇಶದ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ಸರ್ಕಾರದ ಪರವಾಗಿ ಸಾರಿಗೆ ಸಚಿವ ಬೈರತಿ ಸುರೇಶ್, ಬುಧವಾರ ವಿಧಾನಸೌಧದ ತಮ್ಮ ಕಚೇರಿಗೆ ಆಹ್ವಾನಿಸಿ ಸ್ಟೋನ್ ಕ್ರಷರ್ ಮಾಲೀಕರ ಸಮಸ್ಯೆಗಳನ್ನು ಆಲಿಸಿದರು.

ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಇಲಾಖೆ 2 ಕಡೆಗಳಲ್ಲಿ ರಾಜಧನ ಸಂಗ್ರಹಿಸುತ್ತಿದೆ. ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವ ಸಣ್ಣ ಮತ್ತು ಸ್ಥಳೀಯ ಉದ್ಯಮಿಗಳಿಗೆ ತೊಂದರೆಯಾಗುತ್ತಿದೆ. ಇಲಾಖೆಯಲ್ಲಿನ ಆಡಳಿತಾತ್ಮಕ ಸಮಸ್ಯೆಗಳಿಂದ ಕಲ್ಲು ಗಣಿಗಾರಿಕೆ ವಲಯ ಸಂಕಷ್ಟಕ್ಕೆ ಸಿಲುಕಿದೆ. ರಾಜಧನ ಪಾವತಿಯಾಗಿದ್ದರೂ ಮತ್ತೆ ಗಣಿಗುತ್ತಿಗೆದಾರರಿಂದ ರಾಜಧನ ವಸೂಲಿ ಮಾಡುವುದು ಸರಿಯಲ್ಲ.ಹೆಚ್ಚುವರಿ ಆರ್ಥಿಕ ಹೊರೆ ಹೇರುವ ಕ್ರಮಕ್ಕೆ ನಮ್ಮ ವಿರೋಧವಿದೆ. ಹಾಗಾಗಿ, ಈ ಮೇಲಿನ ಸಮಸ್ಯೆ ಬಗೆಹರಿಸಬೇಕೆಂದು ಒಕ್ಕೂಟದ ಅಧ್ಯಕ್ಷ ಡಿ.ಸಿದ್ದರಾಜು, ಸಚಿವರ ಗಮನಕ್ಕೆ ತಂದರು.

ನಿಮ್ಮೆಲ್ಲರ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ಸಿಎಂ ಡಿ.ಕೆ. ಶಿವಕುಮಾರ್ ಅವರಿಗೂ ಕ್ರಷರ್ ಮಾಲೀಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಅರಿವು ಇದೆ. ಹಾಗಾಗಿ, ಪ್ರತಿಭಟನೆ ಕೈಬಿಡುವಂತೆ ಸಚಿವರು ಮನವಿ ಮಾಡಿದ್ದರು. ಇದಕ್ಕೆ ಒಪ್ಪಿದ ಮಾಲೀಕರು ಪ್ರತಿಭಟನೆ ವಾಪಸ್ ಪಡೆದರು.

ವಿವಿಧ ಕ್ಷೇತ್ರಕ್ಕೆ ತಟ್ಟಿದ ಬಿಸಿ:

ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟವು ರಾಜ್ಯಾದ್ಯಂತ ಸೆ.18ರಿಂದ ಜಲ್ಲಿ ಮತ್ತು ಎಂ.ಸ್ಯಾಂಡ್ ಘಟಕಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದ ಪರಿಣಾಮ ರಸ್ತೆ ಕಾಮಗಾರಿ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರಕ್ಕೂ ಬಿಸಿ ತಟ್ಟಿತ್ತು. ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯು ಕುಂಠಿತವಾಗಿತ್ತು. ಇದನ್ನೇ ನಂಬಿಕೊಂಡಿರುವ ಗುತ್ತಿಗೆದಾರರು, ಅವರ ಅವಲಂಬಿತ ಕುಟುಂಬಗಳಿಗೆ ತೊಂದರೆಯಾಗಿತ್ತು.