ಬೆಂಗಳೂರು: ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ವಿಚಾರವಾಗಿ ಎದ್ದಿರುವ ಆಕ್ರೋಶದ ಕಿಚ್ಚನ್ನು ಸಾವಧಾನದಿಂದ ಹಾಗೂ ಹೈಕೋರ್ಟ್ ಸೂಚನೆ ಬಳಸಿಕೊಂಡೇ ತಹಬಂದಿಗೆ ತರಲು ನಿರ್ಧರಿಸಿರುವ ರಾಜ್ಯ ಸರ್ಕಾರ ಈ ಸಂಬಂಧ ಎಲ್ಲ ಜಿಲ್ಲಾಡಳಿತಗಳಿಗೂ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ‘ಯಾವುದೇ ಒತ್ತಡಕ್ಕೆ ಮಣಿಯದೆ ಸಣ್ಣ ಘಟನೆಯನ್ನೂ ಅತ್ಯಂತ ಗಂಭೀರವಾಗಿ ಪರಿಗಣಿಸುವ ಜತೆಗೆ ಉಚ್ಚ ನ್ಯಾಯಾಲಯದ ಆದೇಶವನ್ನು ಅಕ್ಷರಶಃ ಪಾಲಿಸಬೇಕು’ ಎಂದು ಖಡಕ್ ಸೂಚನೆ ನೀಡಿದೆ. ಮತ್ತೊಂದೆಡೆ, ಹಿಜಾಬ್ ವಿವಾದ ಸಂಬಂಧ ನ್ಯಾಯಾಲಯ ನಿರ್ಧಾರ ಕೈಗೊಳ್ಳುವವರೆಗೆ ವಿದ್ಯಾರ್ಥಿಗಳು ಧಾರ್ವಿುಕ ವಸ್ತ್ರಗಳೊಂದಿಗೆ ತರಗತಿಗೆ ಪ್ರವೇಶಿಸುವಂತಿಲ್ಲ ಎಂದು ಹೈಕೋರ್ಟ್ ಶುಕ್ರವಾರ ಮಧ್ಯಂತರ ಆದೇಶ ನೀಡಿದೆ.
ರಾಜ್ಯದ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ವಾತಾವರಣ ಸೃಷ್ಟಿಯಾಗಿದ್ದರಿಂದ ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಲಾಗಿತ್ತು. ಸೋಮವಾರದಿಂದ ಪ್ರೌಢಶಾಲೆ ಆರಂಭಿಸಲು ಸೂಚಿಸಲಾಗಿದೆ. ಆದರೆ, ಪರಿಸ್ಥಿತಿ ಪೂರ್ಣ ತಿಳಿಯಾಗಿದ್ದು ಸ್ಪಷ್ಟವಾದ ನಂತರವಷ್ಟೇ ಕಾಲೇಜು ಆರಂಭಿಸಲು ಸರ್ಕಾರ ಬಯಸಿದೆ. ಇನ್ನೂ ಬೂದಿಮುಚ್ಚಿದ ಕೆಂಡದಂತಿರುವ ವಾತಾವರಣದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸಿಎಂ ಬಸವರಾಜ ಬೊಮ್ಮಾಯಿ ಶುಕ್ರವಾರ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಜಿಲ್ಲಾಡಳಿತಗಳು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ, ಶಾಲಾ ಕಾಲೇಜುಗಳು ನೀಡಬೇಕಾದ ಆದ್ಯತೆ, ಪರಿಸ್ಥಿತಿ ನಿಭಾಯಿಸಲು ಮಾಡಬೇಕಾದ ಕೆಲಸಗಳ ಕುರಿತು ಸಿಎಂ ಸೂಚನೆ ನೀಡಿದರು. ಸೋಮವಾರದಿಂದ ಪ್ರೌಢಶಾಲೆಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕು. ಸೂಕ್ಷ್ಮ ಜಿಲ್ಲೆಗಳಲ್ಲಿ ಪ್ರಮುಖ ಶಾಲೆಗಳಿಗೆ ಡಿಸಿ, ಎಸ್ಪಿ ಭೇಟಿ ನೀಡಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಎಚ್ಚರ ವಹಿಸಿ ಎಂದು ಸಿಎಂ ನಿರ್ದೇಶನ ನೀಡಿದರು.
ಶಾಲಾ ಪ್ರಾಂಶುಪಾಲರು, ಶಿಕ್ಷಕರು, ಪೋಷಕರು ಹಾಗೂ ಆಡಳಿತ ಮಂಡಳಿಯೊಂದಿಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು ಹಾಗೂ ಡಿಡಿಪಿಐ ನಿರಂತರ ಸಂಪರ್ಕ ಹೊಂದಿರಬೇಕು. ಜಿಲ್ಲೆಯ ಹಿರಿಯರು, ಪ್ರಮುಖರು, ಜನಪ್ರತಿನಿಧಿಗಳೊಂದಿಗೂ ನಿರಂತರ ಸಂಪರ್ಕ ಹೊಂದುವಂತೆ ಸೂಚಿಸಿದರು.
ಪ್ರತಿಯೊಬ್ಬರೂ ಉಚ್ಚ ನ್ಯಾಯಾಲಯದ ಆದೇಶ ಪಾಲಿಸಬೇಕು. ಪ್ರಾಂಶುಪಾಲರು ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂ ಅಧಿಕಾರಿಗಳಿಗೆ ತಿಳಿಸಿದರು.
ಸೋಮವಾರ 10ನೇ ತರಗತಿವರೆಗೆ ಶಾಲೆ ಆರಂಭವಾಗುತ್ತಿದೆ. ಪರಿಸ್ಥಿತಿ ನೋಡಿಕೊಂಡು ಒಂದೆರಡು ದಿನಗಳಲ್ಲೇ ಪಿಯುಸಿ ತರಗತಿ ಆರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ ಗೋಯಲ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಉಪಸ್ಥಿತರಿದ್ದರು.
ಗೃಹ ಸಚಿವರು ಹೇಳಿದ್ದೇನು?: ಸೋಮವಾರದಿಂದ 10ನೇ ತರಗತಿವರೆಗೆ ಶಾಲೆಗಳು ಆರಂಭವಾಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಜಿಲ್ಲಾಡಳಿತಗಳಿಗೆ ಸೂಚನೆ ಕೊಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಶಾಲಾ ಪ್ರಾಂಶುಪಾಲರು, ಪೋಷಕರೊಂದಿಗೆ ಸಂಪರ್ಕ ಹೊಂದಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಳೆದ ಎರಡು ದಿನಗಳಲ್ಲಿ ಯಾವುದೇ ಸಣ್ಣ ಅಹಿತಕರ ಘಟನೆಯೂ ನಡೆದಿಲ್ಲ. ಆದರೆ ಹಳೆಯ ಘಟನೆಯನ್ನೇ ಮಾಧ್ಯಮಗಳು ತೋರಿಸುವುದು ನಡೆದಿದೆ, ಪರಿಸ್ಥಿತಿ ಶಾಂತಿಯುತವಾಗಿದೆ ಎಂಬುದನ್ನೇ ಹೆಚ್ಚು ಹೈಲೈಟ್ ಮಾಡಿ ಎಂದು ಕೋರಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದರು.
ಇನ್ನೂ ಶೇ.20-25ರಷ್ಟು ಸಿಲಬಸ್ ಪೂರ್ಣವಾಗಬೇಕಾಗಿದೆ, ತರಗತಿ ಸುಸೂತ್ರವಾಗಿ ನಡೆಯಬೇಕಾಗಿದೆ. ಹಾಗೆಯೇ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆತ್ಮವಿಶ್ವಾಸ ತುಂಬಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ.
‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿದ್ದ ಮಂಡ್ಯದ ವಿದ್ಯಾರ್ಥಿನಿ ಮನೆಗೆ ರಾಜಕೀಯ ನಾಯಕರು ನಿರಂತರವಾಗಿ ಭೇಟಿಕೊಡುತ್ತಿದ್ದಾರೆ, ಇದೊಂದು ರೀತಿ ಪ್ರಚೋದನಕಾರಿಯಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ನಿಜ ಇದನ್ನು ಗಮನಿಸುತ್ತಿದ್ದೇವೆ ಎಂದರು.
ಮಂಡ್ಯದ ಹುಡುಗಿ ಮಾತ್ರವಲ್ಲ, ರಾಜ್ಯದ ಬೇರೆ ಬೇರೆ ಕಡೆ ಮಕ್ಕಳ ಪೋಷಕರು ಕೆಲವು ಮತೀಯ ಸಂಘಟನೆಯಲ್ಲಿದ್ದಾರೆ ಎಂಬುದು ಅರಿವಿನಲ್ಲಿದೆ. ತನಿಖೆ ಮಾಡುತ್ತಿದ್ದೇವೆ, ಪ್ರಚೋದನೆಗೆ ಅವರ ಪಾತ್ರ ಏನೆಂಬುದು ಗೊತ್ತಾಗುತ್ತದೆ ಎಂದರು. ಎನ್ಐಎ ತನಿಖೆ ನಡೆಯಬೇಕೆಂಬ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ‘ಅದು ಅವರವರ ಒತ್ತಾಯ, ನಾವು ಎಲ್ಲ ಆಯಾಮದಲ್ಲಿ ನೋಡುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.
ಪ್ರಚೋದನೆ ಹತ್ತಿಕ್ಕಿ
ಹಿಜಾಬ್ ಸಂಘರ್ಷ ವಿಸ್ತರಣೆಗೆ ಹೊರಗಿನ ಪ್ರಚೋದನೆಯೇ ಕಾರಣ. ಹೀಗಾಗಿ ಪುನಃ ಶಾಲೆ, ಕಾಲೇಜು ಆರಂಭವಾಗುತ್ತಿದ್ದಂತೆ ಹೊರಗಿನ ಪ್ರಚೋದನೆಗೆ ಒಳಗಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಜಿಲ್ಲಾಡಳಿತಗಳಿಗೆ ತಿಳಿಸಿದೆ. ಅಧಿಕಾರಿಗಳು ಒಂದೇ ಕಡೆ ಇರದೆ ಪ್ರದೇಶಗಳನ್ನು ಹಂಚಿಕೆ ಮಾಡಿಕೊಂಡು ನಿಗಾ ವಹಿಸಬೇಕು. ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿ, ಪ್ರಚೋದನಕಾರಿ ಸಂದೇಶ ಹರಡದಂತೆ ಕ್ರಮಕೈಗೊಳ್ಳಿ. ಸಮಾಜಘಾತುಕ ಶಕ್ತಿಗಳನ್ನು ಗುರುತಿಸಿ ನಿಗಾ ಇಡಲಾಗಿದೆ ಎಂಬ ಸಂದೇಶ ರವಾನಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು.
16ರವರೆಗೆ ರಜೆ ಘೋಷಣೆ
ಫೆಬ್ರವರಿ 12ರಿಂದ 16ರವರೆಗೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯ, ಪದವಿ, ಇಂಜಿನಿಯರಿಂಗ್, ಡಿಪ್ಲೊಮಾ ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ.