ಚಿಕ್ಕಮಗಳೂರು: ಜನಪದದಲ್ಲಿ ಲೋಕಪ್ರಜ್ಞೆ, ಸ್ತ್ರೀಸಂವೇದನೆ ಹಾಸುಹೊಕ್ಕಾಗಿದೆ. ಪುರಾಣದ ಕಲ್ಪನೆ, ನೆಲದ ಪ್ರಜ್ಞೆ, ಮಣ್ಣಿನ ಸಂಸ್ಕೃತಿ, ಜನಪದದಲ್ಲಿ ವಿಪುಲವಾಗಿದ್ದು ಬದುಕಿನ ಎಲ್ಲ ಕ್ಷೇತ್ರಗಳ ಕುರಿತಂತೆ ಜನಪದದಲ್ಲಿ ವಿವರಿಸಲಾಗಿದೆ ಎಂದು ಭಾರತೀಯ ಸಾಹಿತ್ಯ ಪರಿಷತ್ ನಿಟಕಪೂರ್ವ ಅಧ್ಯಕ್ಷ ಚಟ್ನಳ್ಳಿ ಮಹೇಶ್ ಹೇಳಿದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಶ್ರಾವಣ ಮಾಸದ ಪ್ರವಚನ ಮಾಲಿಕೆ ಮುತ್ತಿನಂಥ ಮಾತು ಅಭಿಯಾನದ ಅಂಗವಾಗಿ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಜನಪದ ದಿನಾಚರಣೆಯಲ್ಲಿ ಮಾತನಾಡಿದರು.
ಶ್ರಮಿಕರು ಜೀವಾನುಭವದಿಂದ ಕಟ್ಟಿದ ಜಾನಪದ ಸಂಪತ್ತು ನಮ್ಮ ಬದುಕಿಗೆ ಮಾರ್ಗದರ್ಶಿಯಾಗಿದೆ. ಕನ್ನಡ ಸಾಹಿತ್ಯದಲ್ಲಿ ಸ್ತ್ರೀಸಂವೇದನೆ ವಿಶೇಷವಾಗಿ ಗುರುತಿಸಬಹುದು. ಅದರಲ್ಲೂ ಜಾನಪದದಲ್ಲಿ ಸ್ತ್ರೀಯರ ನೋವು ನಲಿವು, ಸುಖ-ದುಃಖ, ಆಚಾರ ವಿಚಾರ, ಉಡುಗೆ ತೊಡುಗೆ, ಬದುಕು ಬೆವರು ಕುರಿತಂತೆ ವ್ಯಾಪಕ ಚಿಂತನೆಗಳನ್ನು ಕಾಣಬಹುದು ಎಂದರು.
ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರಭು ಮಾತನಾಡಿ, 30ಕ್ಕೂ ಹೆಚ್ಚು ಉಪಯುಕ್ತ ವಿಚಾರಗಳ ಬಗ್ಗೆ ಮಾಹಿತಿ ನೀಡುವ ಅಭಿಯಾನ ಆದರ್ಶಪ್ರಾಯ ಎಂದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಮಾತನಾಡಿ, ಶ್ರಾವಣ ಮಾಸದಲ್ಲಿ ಒಳ್ಳೆಯ ಮಾತುಗಳನ್ನು ಕೇಳುವ ಪರಿಪಾಠ ಸನಾತನ ಸಂಸ್ಕೃತಿಯಲ್ಲಿ ಬಂದಿದೆ. ವಿಭಿನ್ನ ವಿಚಾರಗಳ ಬಗ್ಗೆ ಸಮಾಜಕ್ಕೆ ಸಹಕಾರಿಯಾದ ಸಂಗತಿಗಳನ್ನು ಜನಮಾನಸಕ್ಕೆ ಮುಟ್ಟಿಸುವ ಪ್ರಯತ್ನವೇ ಮುತ್ತಿನಂಥ ಮಾತು ಅಭಿಯಾನ ಎಂದರು.