ಭದ್ರಾವತಿ ತಾಲೂಕು ಕಾರೇಹಳ್ಳಿ ಗ್ರಾಮದ ಎಸ್‌ಎಇಎಸ್ ಶಾಲೆಯ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಜಾನಪದ ನೃತ್ಯ.  
ನ್ಯೂಸ್

ಜಾನಪದ ಕಲೆಗಳು ಜೀವನದ ಪ್ರತಿಬಿಂಬ

ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮ

ಭದ್ರಾವತಿ: ಜಾನಪದವೆಂದರೆ ಕೇವಲ ಮನೋರಂಜನೆಯಲ್ಲ, ಅದು ನಮ್ಮ ಜೀವನದ ಪ್ರತಿಬಿಂಬ ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಕಾರೇಹಳ್ಳಿ ಎಸ್‌ಎಇಎಸ್ ಶಾಲೆಯಲ್ಲಿ ಜಾನಪದೋತ್ಸವ ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಗ್ರಾಮೀಣ ಬದುಕಿನ ಆಚಾರ-ವಿಚಾರಗಳು, ನಂಬಿಕೆಗಳು, ಕಲೆಗಳು, ಹಾಡುಗಳು, ಕುಣಿತ ಹಾಗೂ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸುಂದರ ವೇದಿಕೆ ಎಂದು ಅಭಿಪ್ರಾಯಪಟ್ಟರು.

ಜಾನಪದ ಕಲೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಮಹತ್ವದ ಉದ್ದೇಶದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮ ಅತ್ಯಂತ ವೈಭವದಿಂದ ನೆರವೇರಿತು. ಜಾನಪದ ನೃತ್ಯಗಳು, ಗೀತೆಗಳ ಗಾಯನ, ಡೊಳ್ಳು ಕುಣಿತ, ವೀರಗಾಸೆ, ಚಂಡೆ ವಾದನ ಹಾಗೂ ಪೂಜಾ ಕುಣಿತ ಮುಂತಾದ ಜಾನಪದ ಕಲಾ ಪ್ರದರ್ಶನಗಳು ಪ್ರೇಕ್ಷಕರ ಮನಸೆಳೆದವು. ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳಿಸಿದ 22 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಶಿವಮೊಗ್ಗ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ, ರಾಷ್ಟ್ರೀಯ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ರತ್ನಾಕುಮಾರಿ, ತೀರ್ಥಹಳ್ಳಿಯ ಆರಗ ಜೂನಿಯರ್ ಕಾಲೇಜಿನ ಪ್ರಾಚಾರ್ಯ ವಸಂತ್, ಶಾಲೆ ಪ್ರಾಚಾರ್ಯ ವಿ.ರವಿಕುಮಾರ್, ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.