ಕೋಲಾರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ನೌಕರರು, ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಸದಸ್ಯರು ನಗರದ ಜಿ.ಪಂ. ಕಚೇರಿ ಎದುರು ಸೋಮವಾರ ಅರ್ನಿಧಿಷ್ಟಾವಧಿ ಧರಣಿ ನಡೆಸಿದರು.
ಪಿಡಿಒಗಳ ಸಂಘದ ಜಿಲ್ಲಾಧ್ಯಕ್ಷ ಸಂಪರಾಜ್ ಮಾತನಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ಹುದ್ದೆಗೆ ಉನ್ನತಿಕರಿಸಬೇಕು. ಜ್ಯೇಷ್ಠತಾಪಟ್ಟಿ ಅಂತಿಮಗೊಳಿಸಿ ತಕ್ಷಣ ಬಡ್ತಿ ನೀಡಬೇಕು, ಕರ ವಸೂಲಿಗಾರ, ನೀರುಗಂಟಿ ಸೇರಿ ಪಂಚ ನೌಕರರಿಗೆ ಇಎಸ್ಐ, ಪಿಎಫ್ ಜಾರಿ ಮಾಡಬೇಕು. ಗ್ರೇಡ್-1 ಕಾರ್ಯದರ್ಶಿ ಹುದ್ದೆಗೆ ಒಂದು ಬಾರಿ ಜಿಲ್ಲಾಮಟ್ಟದಲ್ಲಿ ಪದೋನ್ನತಿ ನೀಡಬೇಕು. ಪ್ರಮುಖವಾಗಿ ಕೆಲಸದ ಒತ್ತಡ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ.4ರಿಂದ ಬೆಂಗಳೂರಿನ ಸ್ವಾತಂತ್ರ$್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಆದರೆ, ಇದುವರೆಗೂ ಇಲಾಖೆ ಹಾಗೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು, ಇಲಾಖೆಯ ಸಚಿವರು ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡುವವರೆಗೂ ಧರಣಿ ಮುಂದುವರೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಪ್ರತಿಭಟನೆಯ ವಿಚಾರವು ಸರ್ಕಾರದ ಗಮನಕ್ಕೆ ಹೋಗಿದ್ದು, ನೌಕರರು ಸಲ್ಲಿಸಿರುವ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಸೇವೆಗಳು ಬಂದ್
ಗ್ರಾಪಂ ನೌಕರರು ಧರಣಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಕೆಲಸಗಳು ಸ್ಥಗಿತಗೊಂಡಿವೆ. ಮೂಲ ಸೌಲಭ್ಯಗಳು ಹೊರತು ಪಡಿಸಿದರೆ ಉಳಿದೆಲ್ಲ ಸೇವೆಗಳನ್ನು ನಿಲ್ಲಿಸಲಾಗಿದೆ. ಇ&-ಸ್ವತ್ತು, ನರೇಗಾ ಯೋಜನೆ, ಕೊಳವೆಬಾವಿ, ಮನೆಯ ವಿದ್ಯುತ್ ಸಂಪರ್ಕಕ್ಕೆ ನಿರಪೇಕ್ಷಣಾ ಪತ್ರ ನೀಡಿಕೆ, ವ್ಯಾಪಾರ ಪರವಾನಗಿ, ತೆರಿಗೆ ಸ್ವೀಕೃತಿ, ಜನನ ಮತ್ತು ಮರಣ ಪ್ರಮಾಣ ಪತ್ರ ನೀಡಿಕೆ ಸೇರಿ ಸಕಾಲ ಯೋಜನೆಯಡಿ ಬರುವ ಸೇವೆಗಳು ವ್ಯತ್ಯಯವಾಗಿವೆ.
ಪ್ರತಿಭಟನೆಯಲ್ಲಿ ಪಿಡಿಗಳ ಸಂದ ಗೌರವಾಧ್ಯಕ್ಷ ಕೆ.ಮಹೇಶ್ ಕುಮಾರ್, ರಾಜ್ಯ ಪರಿಷತ್ ಸದಸ್ಯ ಸುರೇಶ್ಬಾಬು, ಸಂಘಟನಾ ಕಾರ್ಯದರ್ಶಿ ದೀಪಾ, ಕಾರ್ಯದರ್ಶಿ ಎಂ.ರಾಮಕೃಷ್ಣಪ್ಪ, ಜಿಲ್ಲಾ ಗೌರವ ಸಲಹೆಗಾರ ಕಾಶಿನಾಥ್, ತಾಲೂಕು ಅಧ್ಯಕ್ಷರಾದ ಸತೀಶ್, ಅಶ್ವತ್ಥನಾರಾಯಣ ವೇಣು, ಅಂಬರೀಶ್, ಏಜಾಜ್ಪಾಷಾ, ಸಂಪತ್, ಗ್ರಾ.ಪಂ ಸದಸ್ಯರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಹೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಚಲಪತಿ, ಉಪಾಧ್ಯಕ್ಷೆ ಉಮಾದೇವಿ, ಡಿಇಒ, ಕ್ಲರ್ಕ್ಗಳ ಸಂಘದ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಕರಿಬಸಪ್ಪ ಇದ್ದರು.