ನ್ಯೂಸ್

ಹೂವಿನ ವಿಧಾನಸೌಧ ಕಂಡೀರಾ? ಲಾಲ್​ಬಾಗ್​ನಲ್ಲಿ ಇಂದು ಸಂಜೆಯಿಂದ ಫ್ಲವರ್ ಶೋ

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಭಾಗವಾಗಿ ಲಾಲ್​ಬಾಗ್​ನಲ್ಲಿ 214 ನೇ ಫ್ಲವರ್ ಶೋ ನಡೆಯಲಿದ್ದು ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಇಂದಿನಿಂದ ಶುರುವಾಗಲಿರುವ ಫಲಪುಷ್ಪ ಪ್ರದರ್ಶನ ಸ್ವಾತಂತ್ರ್ಯೋತ್ಸವದ ದಿನದ ತನಕವೂ ಮುಂದುವರೆಯಲಿದೆ.

ಹೂವಿನ ವಿಧಾನಸೌಧ ಕಂಡೀರಾ?

ಈ ವಿಶಿಷ್ಟ ಫ್ಲವರ್​ ಶೋ, ಇಂದಿನಿಂದ ಆರಂಭವಾಗಿ ಆಗಸ್ಟ್ 15ರವರೆಗೂ ನಡೆಯಲಿದೆ. ಈ ಬಾರಿ ಸೆಂಟರ್ ಆಫ್ ಅಟ್ರಾಕ್ಷನ್ ಹೂವಿನ ವಿಧಾನ ಸೌಧವಾಗಿರಲಿದೆ. ವಿಧಾನಸೌಧ ಹಾಗೂ ಕೆಂಗಲ್ ಹನುಮಂತಯ್ಯನವರ ಕಾನ್ಸೆಪ್ಟ್​ನಲ್ಲಿ ಫ್ಲವರ್ ಶೋ ಅರಳಿದ್ದು, ಈ ಬಾರಿ ಸ್ವದೇಶಿಯ ಹೂಗಳಿಗೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಲಾಗಿದೆ.

ವಿಧಾನಸೌಧಕ್ಕೆ ಬರೋಬ್ಬರಿ 3.5 ಲಕ್ಷ ಹೂಗಳ ಬಳಕೆ!

ಈ ಬಾರಿ ಹೂವಿನ ವಿಧಾನಸೌಧಕ್ಕೆ ಮೂರುವರೆ ಲಕ್ಷ ಹೂಗಳನ್ನು ಬಳಸಿಕೊಳ್ಳಲಾಗಿದೆ, ಈ ಸಲ ಫ್ಲವರ್ ಶೋಗೆ 10 ರಿಂದ 12 ಲಕ್ಷದಷ್ಟು ಜನ ಬರುವ ನಿರೀಕ್ಷೆ ಇದ್ದು, ಲಾಲ್​ಬಾಗ್​ನ ನಾಲ್ಕು ಗೇಟ್​ಗಳಲ್ಲಿ ಜನರಿಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ನಾಳೆಯಿಂದ ಜನರಿಗೆ ಫ್ಲವರ್ ಶೋ ನೋಡಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದ್ದು ಇಂದು ಸಂಜೆ ಉದ್ಘಾಟನೆ ನಡೆಯಲಿದೆ.

ಟಿಕೆಟ್​ ದರ ಎಷ್ಟಿರಲಿದೆ?

ಫಲಪುಷ್ಪ ಪ್ರದರ್ಶನಕ್ಕೆ ಈಗಾಗಲೇ ದರ ನಿಗದಿ ಮಾಡಲಾಗಿದ್ದು ವಯಸ್ಕರಿಗೆ 80 ರೂ. ನಿಗದಿ ಮಾಡಲಾಗಿದೆ. ಇನ್ನು ಸಣ್ಣ ಮಕ್ಕಳಿಗೆ 30 ರೂ.ಗೆ ಟಿಕೆಟ್​ ಲಭಿಸಲಿದೆ. ಇನ್ನು ಶಾಲಾ ಮಕ್ಕಳು ಸಮವಸ್ತ್ರದಲ್ಲಿ ಶಾಲೆಯ ಐಡಿ ಕಾರ್ಡ್​ ಜತೆಗೆ ಬಂದರೆ, ಉಚಿತ ಪ್ರವೇಶ ಲಭಿಸಲಿದೆ. ಇನ್ನು ಭದ್ರತೆಯ ದೃಷ್ಟಿಯಿಂದ ಸುಮಾರು 200 ಸಿಸಿ ಕ್ಯಾಮರಾಗಳು ಹಾಗೂ 400 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎನ್ನಲಾಗಿದೆ.

ಎಲ್ಲೆಲ್ಲಿ ವಾಹನ ನಿಲುಗಡೆಗೆ ಮಾಡಬಹುದು?

  1. ಡಾ.ಮರೀಗೌಡ ರೋಡ್
  2. ಆಲ್ ಅಮೀನ್ ಕಾಲೇಜು ಅವರಣ
  3. ಕೆ ಹೆಚ್ ರೋಡ್ ಶಾಂತಿನಗರ ಬಸ್ ನಿಲ್ದಾಣ
  4. ಮರಿಗೌಡ ರೋಡ್​ನಲ್ಲಿ ಬೈಕ್ ಮತ್ತು ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ
  5. ಜೆಸಿ ರೋಡ್ ಕಾರ್ಪೊರೇಷನ್​ನ ಪಾರ್ಕಿಂಗ್ ಸ್ಥಳ

ವಾಹನ ನಿಲುಗಡೆಯನ್ನು ಎಲ್ಲೆಲ್ಲಿ ನಿಷೇಧಿಸಲಾಗಿದೆ?

ಮರಿಗೌಡ ರೋಡ್ ಲಾಲ್ ಬಾಗ್ ಮುಖ್ಯದ್ವಾರದಿಂದ ನಿಮಾನ್ಸ್ ವರೆಗೆ ಎರಡೂ ರಸ್ತೆ ಬದಿ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ. ಕೆಎಚ್ ರೋಡ್​ನಿಂದ ಶಾಂತಿ ನಗರ ಬಸ್ ನಿಲ್ದಾಣವರೆಗೂ ವಾಹನಗಳನ್ನು ನಿಲ್ಲಿಸುವಂತಿಲ್ಲ. ಸಿದ್ದಯ್ಯ ರೋಡ್, ಊರ್ವಶಿ ಥೀಯೇಟರ್ ಜಂಕ್ಷನ್ ನಿಂದ ವಿಲ್ಸನ್ ಗಾರ್ಡನ್​ವರೆಗೂ ಎಲ್ಲೂ ಪಾರ್ಕಿಂಗ್​ಗೆ ಅವಕಾಶವಿಲ್ಲ. ಅಶೋಕ ಪಿಲ್ಲರದ ನಿಂದ ಸಿದ್ದಾಪುರ ಜಂಕ್ಷನ್​ವರೆಗೆ ಹಾಗೂ ಆರ್​ವಿ ಟೀಚರ್ಸ್ ಕಾಲೇಜ್​ನಿಂದ ಆಶೋಕ್ ಪಿಲ್ಲರ್​ವರೆಗೂ ವಾಹನ ನಿಲುಗಡೆಗೆ ಅವಕಾಶವಿರುವುದಿಲ್ಲ.