ಮೂಗೂರಿನ ಶ್ರೀ ತ್ರಿಪುರ ಸುಂದರಿ ಅಮ್ಮನವರ ದರ್ಶನ ಪಡೆದ ಭಕ್ತರು. 
ನ್ಯೂಸ್

ಶ್ರೀ ತ್ರಿಪುರ ಸುಂದರಿ ಅಮ್ಮನವರಿಗೆ ಹೂವಿನ ಅಲಂಕಾರ

ಮೂಗೂರು: ಆಷಾಢ ಮಾಸದ ಕಡೇ ಶುಕ್ರವಾರ ಇಲ್ಲಿನ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದಲ್ಲಿ ಕನಕಾಂಬರ ಹೂವಿನ ಸೀರೆಯ ಅಲಂಕಾರದಿಂದ ಕಂಗೊಳಿಸುತ್ತಿದ್ದ ಅಮ್ಮನವರ ದರ್ಶನ ಪಡೆಯಲು ಭಕ್ತರು ಮುಗಿಬಿದ್ದರು.

ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯವನ್ನು ತಳಿರು ತೋರಣ ಹಾಗೂ ವಿವಿಧ ಬಗೆಯ ಹೂಗಳಿಂದ ವಿದ್ಯುತ್ ದೀಪಗಳಿಂದ ಅಲಂಕರಿಸಿ ಮುಂಜಾನೆ ಶ್ರೀ ತ್ರಿಪುರ ಸುಂದರಿ ಅಮ್ಮನವರಿಗೆ ಹಾಗೂ ಶ್ರೀ ದೇಶೇಶ್ವರ ಸ್ವಾಮಿ ಹಾಗೂ ಪಾರ್ವತಿ ಅಮ್ಮ ನವರಿಗೆ ಅಭಿಷೇಕ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಬೆಳಗ್ಗೆಯಿಂದಲೇ ರಾಜ್ಯದ ವಿವಿಧ ಭಾಗಗಳಿಂದ ತಂಡೋಪತಂಡವಾಗಿ ಬಂದ ಭಕ್ತರು ದೇಗುಲದ ಪ್ರಾಂಗಣ ಸುತ್ತಲೂ ಸುತ್ತುವರಿದ ಭಕ್ತರಿಗೆ ಯಾವುದೇ ಸಿದ್ಧತೆ ಕೈಗೊಳ್ಳದ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.

ಪ್ರಯಾಸದ ನಡುವೆ ಬಿಸಿಲನ್ನೂ ಲೆಕ್ಕಿಸದೆ ಅಮ್ಮ ನವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆಯುವಂತಾಯಿತು. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಅಮ್ಮ ನವರಿಗೆ ಮಡ್ಲಕ್ಕಿ ಸೇವೆ, ನಿಂಬೆ ಹಣ್ಣು ಬೆಲ್ಲದಾರತಿ ಸೇವೆ ನೆರವೇರಿಸಿ ಪ್ರಾರ್ಥಿಸಿದರು. ಬೆಳಗ್ಗೆಯಿಂದ ಸಂಜೆ ತನಕ ದೇವಾಲಯದ ಆವರಣ ಮಹಿಳೆಯರ ಕಲರವದಿಂದ ಕೂಡಿದ್ದು ಅಮ್ಮ ನವರ ವೈಭವವನ್ನು ಕಣ್ತುಂಬಿಕೊಂಡರು. ಹರಕೆ ಹೊತ್ತ ಭಕ್ತರು ದೇಗುಲದಲ್ಲಿ ಪ್ರಸಾದ ತಯಾರಿಸಿ ವಿತರಿಸಿದರು. ಗ್ರಾಮದಲ್ಲಿ ಚಿಕ್ಕ ಜಾತ್ರೆಯೇ ಏರ್ಪಟ್ಟಿದ್ದು ವ್ಯಾಪಾರ ಭರಾಟೆ ಜೋರಾಗಿಯೇ ನಡೆಯಿತು. ದೇವಾಲಯಕ್ಕೆ ಆಗಮಿಸಿ ಭಕ್ತರಿಗೆ ಶೌಚಗೃಹದ ವ್ಯವಸ್ಥೆ ಇಲ್ಲದೆ ಪರದಾಡಿದರು. ಗುಂಪಾಗಿ ಬಂದ ಮಹಿಳೆಯರು ಶೌಚಗೃಹಕ್ಕಾಗಿ ಬಯಲನ್ನೇ ಆಶ್ರಯಿಸಿಬೇಕಾಯಿತು.