ವಾಷಿಂಗ್ಟನ್: ಅಮೆರಿಕದ ಫ್ಲಾರಿಡಾದಲ್ಲಿ ಮಿದುಳು ತಿನ್ನುವ ಅಮೀಬಾ ‘ನೆಗಲೇರಿಯಾ ಫ್ಲೊವೆರಿ’ ಸೋಂಕಿನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಫ್ಲೋರಿಡಾದ ಷಾರ್ಲೆಟ್ ಕೌಂಟಿಯಲ್ಲಿ ವ್ಯಕ್ತಿಯೊಬ್ಬ ಟ್ಯಾಪ್ ನೀರಿನಿಂದ ಮುಖ ತೊಳೆದ ಕಾರಣ ಮೂಗಿನ ಮೂಲಕ ಅಮೀಬಾ ದೇಹಕ್ಕೆ ಸೇರಿದೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.
ಕಳೆದ ವರ್ಷ ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬರು ಇದೇ ಮಿದುಳು ತಿನ್ನುವ ಅಮೀಬಾಕ್ಕೆ ಬಲಿಯಾಗಿದ್ದರು. ಅಮೀಬಾ ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿ ನಂತರ ಮೆದುಳಿನ ಕಡೆಗೆ ಚಲಿಸುತ್ತದೆ. ನಂತರ ಜೀವಿಯು ಮಿದುಳಿನ ಅಂಗಾಂಶವನ್ನು ನಾಶಪಡಿಸುತ್ತದೆ. ಇದು ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಎಂಬ ಹಾನಿಕಾರಕ ಸೋಂಕನ್ನು ಉಂಟುಮಾಡುತ್ತದೆ. ಸೋಂಕು ಹೆಚ್ಚು ಮಾರಣಾಂತಿಕವಾಗಿರುತ್ತದೆ.
ಮಿದುಳು ತಿನ್ನುವ ಅಮೀಬಾ ಎಂದು ಕರೆಯಲ್ಪಡುವ ನೆಗಲೇರಿಯಾ ಫ್ಲೊವೆರಿ ಏಕಕೋಶ ಜೀವಿಯಾಗಿದ್ದು, ಸೂಕ್ಷ್ಮದರ್ಶಕದ ಅಡಿಯಲ್ಲಿ ಮಾತ್ರ ಗೋಚರಿಸುತ್ತದೆ. ಇದು ಸರೋವರಗಳು, ನದಿಗಳು, ಬಿಸಿ ನೀರಿನ ಬುಗ್ಗೆಗಳಂತಹ ಬೆಚ್ಚಗಿನ ಸಿಹಿ ನೀರಿನ ಪರಿಸರದಲ್ಲಿ ಕಂಡುಬರುತ್ತವೆ. ಅಮೀಬಾ ಇರುವ ನೀರು ಮೂಗಿನಿಂದ ಹಾದು ಹೋದಾಗ ಮಿದುಳಿಗೆ ಸೋಂಕು ಉಂಟು ಮಾಡುತ್ತದೆ. ಹಾಗಾಗಿ ಇದನ್ನು ಮಿದುಳುತಿನ್ನುವ ಅಮೀಬಾ ಎಂದು ಕರೆಯಲಾಗುತ್ತದೆ.
ತಲೆನೋವು, ಜ್ವರ, ವಾಂತಿ, ಕುತ್ತಿಗೆ ನೋವು, ಭೇದಿ ಇತ್ಯಾದಿ. ಈ ಲಕ್ಷಣಗಳು ಗೋಚರಿಸಿದ 18 ದಿನದೊಳಗೆ ಪ್ರಾಣಕ್ಕೆ ಅಪಾಯ ಸಂಭವಿಸಬಹುದು. ಇಲ್ಲವೇ ಗುಣಮುಖರಾಗಬಹುದು.