ನ್ಯೂಸ್

ರಾಜ್ಯದಲ್ಲಿ 15,410 ಕೋಟಿ ರೂ. ನೆರೆ ಹಾನಿ: ಕೇಂದ್ರಕ್ಕೆ ಸಿಎಂ ಮನವಿ

arunakunigal

ಬೆಂಗಳೂರು: ಪ್ರವಾಹದಿಂದ ರಾಜ್ಯದಲ್ಲಿ ಅಂದಾಜು 15,410 ಕೋಟಿ ರೂ. ನಷ್ಟವಾಗಿದ್ದು, ಅದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ನೆರವಿಗೆ ಬರಬೇಕೆಂದು ಸಿಎಂ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿಯ ಅಧ್ಯಯನ ನಡೆಸಲು ಆಗಮಿಸಿರುವ ರಾಷ್ಟ್ರೀಯ ವಿಪತ್ತು ಪ್ರಾಧಿಕಾರದ ಜಂಟಿ ಕಾರ್ಯದರ್ಶಿ (ಆಡಳಿತ) ರಮೇಶ್​ಕುಮಾರ್ ಗಂಟಾ ನೇತೃತ್ವದ ತಂಡದ ಜತೆ ಸಿಎಂ ಮಾಹಿತಿ ಹಂಚಿಕೊಂಡರು. ಪ್ರವಾಹ/ಭೂಕುಸಿತದಿಂದ 16 ಲಕ್ಷ ಹೆ.ಗಿಂತ ಹೆಚ್ಚಿನ ಬೆಳೆ ಹಾನಿಯಾಗಿದೆ. ಮೂಲಸೌಕರ್ಯಗಳ ತೀವ್ರ ಹಾನಿ ಹೊರತಾಗಿ ಸುಮಾರು 34,794 ಮನೆಗಳಿಗೆ ಹಾನಿಯಾಗಿದೆ. ರಾಜ್ಯ ಸರ್ಕಾರ 7.12 ಲಕ್ಷ ರೈತರಿಗೆ 551.14 ಕೋಟಿ ರೂ.ಗಳ ಇನ್ಪುಟ್ ಸಬ್ಸಿಡಿ ವಿತರಿಸಿ ನೆರವಾಗಿದೆ ಎಂದರು. ಈ ವರ್ಷ ವಸತಿ ಸಹಾಯಕ್ಕಾಗಿ 465 ಕೋಟಿ ರೂ. ಖರ್ಚು ಮಾಡುತ್ತೇವೆ. ಅಂದಾಜು 15,410 ಕೋಟಿ ರೂ.ಗಳ ನಷ್ಟವನ್ನು ಗಮನದಲ್ಲಿಟ್ಟುಕೊಂಡು, ಸಂತ್ರಸ್ಥರಿಗೆ ಪರಿಹಾರ ನೀಡಲು ಮತ್ತು ಹಾನಿಗೊಳಗಾದ ಮೂಲಸೌಕರ್ಯಗಳ ದುರಸ್ತಿಗೆ ಕೇಂದ್ರ ನೆರವಾಗಬೇಕೆಂದು ಮನವಿ ಮಾಡಿದರು.

ಮೋದಿ, ಅಮಿತ್ ಷಾಗೆ ಕೃತಜ್ಞತೆ: ವಿಡಿಯೋ-ಕಾನ್ಪರೆನ್ಸ್ ಮೂಲಕ ಎರಡು ಬಾರಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದ್ದಕ್ಕಾಗಿ ಮತ್ತು ಪ್ರವಾಹವನ್ನು ನಿರ್ವಹಿಸಲು ಎಲ್ಲ ಬೆಂಬಲವನ್ನು ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಪ್ರವಾಹ ಪರಿಹಾರಕ್ಕಾಗಿ ಎನ್​ಡಿಆರ್​ಎಫ್​ನಿಂದ 577.84 ಕೋಟಿ ರೂ. ಬಿಡುಗಡೆ ಮಾಡಿದ್ದಕ್ಕಾಗಿ ಮತ್ತು ಅಧ್ಯಯನ ತಂಡ ಕಳುಹಿಸಿರುವುದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಕೃತಜ್ಞತೆ ಸಲ್ಲಿಸಿದರು.