ನ್ಯೂಸ್

ಟ್ರಂಪ್ ಭೇಟಿ ವೇಳೆ ಹೆಣ್ಣುಮಕ್ಕಳ ವಿಭಿನ್ನ ನೃತ್ಯ​!? ವೈರಲ್ ವಿಡಿಯೋ ಕಂಡ ನೆಟ್ಟಿಗರು ಅಚ್ಚರಿ | Trump Visit

Trump Visit: ಇತ್ತೀಚೆಗಷ್ಟೇ ಕತಾರ್​ಗೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶುಕ್ರವಾರ ಯುನೈಟೆಡ್ ಅರಬ್ ಎಮಿರೇಟ್ಸ್​ಗೆ (ಯುಎಇ) ಆಗಮಿಸಿದ್ದರು. ಈ ವೇಳೆ ಟ್ರಂಪ್​ರನ್ನು ಸ್ವಾಗತಿಸಿದ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಅಬುಧಾಬಿಯಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳು ತಮ್ಮ ಕೂದಲನ್ನು ಹರಿಬಿಟ್ಟು ಕುಣಿದಾಡಿದ ದೃಶ್ಯ ಸದ್ಯ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಯುಎಇ ಅಧ್ಯಕ್ಷರ ಪ್ಯಾಲೆಸ್​ ಕಸ್ರ್ ಅಲ್ ವತನ್‌ನಲ್ಲಿ ಟ್ರಂಪ್ ಅವರ ಮುಂದೆ ಮಹಿಳೆಯರು "ಅಲ್ ಅಯಾಲಾ" ಎಂಬ ಸಾಂಸ್ಕೃತಿಕ ಕಲೆ ಪ್ರದರ್ಶಿಸಿದರು. ಮಹಿಳೆಯರು ತಮ್ಮ ಕೂದಲನ್ನು ಬಲದಿಂದ ಎಡಕ್ಕೆ ಮತ್ತು ಎಡದಿಂದ ಬಲಕ್ಕೆ ತಿರುಗಿಸುತ್ತಿದ್ದರು. ಅದೇ ವೇಳೆ, ಅನೇಕ ಪುರುಷರು ಚಾಕುಗಳಂತೆ ಹರಿತವಾದ ಆಯುಧಗಳನ್ನು ಝಳಪಿಸುತ್ತಿರುವುದೂ ಕಂಡುಬಂದಿದೆ. ಹಲವರಿಗೆ ಈ ದೃಶ್ಯ ಅಚ್ಚರಿ ಮೂಡಿಸಿದ್ದೇ ಆದರೂ ನಂತರದಲ್ಲಿ ಇದು ಅವರ ಕಲೆಯ ಒಂದು ಭಾಗ ಎಂಬುದನ್ನು ಅರ್ಥ ಮಾಡಿಕೊಳ್ಳಲಾಗಿದೆ.

ಯುನೆಸ್ಕೋ ಪ್ರಕಾರ, ಅಲ್ ಅಯಾಲಾ ಎಂದು ಕರೆಯಲ್ಪಡುವ ಸಾಂಸ್ಕೃತಿಕ ಪ್ರದರ್ಶನವು ಕವನ ವಾಚನ, ಡ್ರಮ್ ಸಂಗೀತ ಮತ್ತು ನೃತ್ಯವನ್ನು ಒಳಗೊಂಡಿದೆ. ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ ಹುಡುಗಿಯರು ಸಾಲಾಗಿ ನಿಂತು, ತಮ್ಮ ಉದ್ದನೆಯ ಕೂದಲನ್ನು ತಿರುಗಿಸುತ್ತಾರೆ. ಸುಮಾರು 20 ಪುರುಷರು, ಮಹಿಳೆಯರ ಹಿಂದೆ ನಿಲ್ಲುತ್ತಾರೆ. ಈ ನೃತ್ಯವನ್ನು ಸಾಮಾನ್ಯವಾಗಿ ಒಮಾನ್ ಮತ್ತು ಯುಎಇಯಲ್ಲಿ ಮದುವೆ ಮತ್ತು ಹಬ್ಬಗಳ ಸಮಯದಲ್ಲಿ ಪ್ರದರ್ಶಿಸಲಾಗುತ್ತದೆ.

ನರ್ತಕರು ವಿವಿಧ ಜಾತಿಗಳು ಮತ್ತು ವಯಸ್ಸಿನವರಾಗಿರುತ್ತಾರೆ. ಪ್ರಮುಖ ಪ್ರದರ್ಶಕನು ಆನುವಂಶಿಕ ಪಾತ್ರವನ್ನು ವಹಿಸುತ್ತಾನೆ. ಇವರು ಇತರ ಪ್ರದರ್ಶಕರಿಗೆ ತರಬೇತಿ ನೀಡುತ್ತಾರೆ. ಅಲ್ ಅಯಲಾ ನೃತ್ಯ ಎಲ್ಲಾ ವಯಸ್ಸಿನ ಮತ್ತು ಸಾಮಾಜಿಕ ವರ್ಗಗಳ ಜನರು ಪ್ರದರ್ಶಿಸುವ ಕಲೆ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).