ಶಿವಮೊಗ್ಗ: ಜಿಲ್ಲೆಯ ಜನರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಈಗಾಗಲೇ ಘೋಷಿಸಿರುವಂತೆ ಆ.11ಕ್ಕೆ ಶಿವಮೊಗ್ಗ ಏರ್‌ಪೋರ್ಟ್ ವಿಮಾನ ಯಾನ ಆರಂಭಿಸಲಿದೆ ಎಂದು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಆ.11ರಿಂದ ಶಿವಮೊಗ್ಗ ಏರ್‌ಪೋರ್ಟ್ ಕಾರ್ಯಾಚರಣೆ ಆರಂಭವಾಗಲಿದೆ. ಇದಕ್ಕೆ ಪೂರಕವಾಗಿ ಜು.20ರೊಳಗೆ ಕೆಲ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ ಎಂದರು.
ವಿಮಾನ ನಿಲ್ದಾಣಕ್ಕೆ ಪ್ರತ್ಯೇಕವಾಗಿ ಆಂಬುಲೆನ್ಸ್ ಮತ್ತಿತರ ವಾಹನಗಳನ್ನು ಒದಗಿಸಬೇಕು. ಕಾಫಿ ಕೆಫೆ ತೆರೆಯಬೇಕು. ತಾಂತ್ರಿಕ ಹಾಗೂ ತಾಂತ್ರಿಕೇತರ ಸಿಬ್ಬಂದಿ ನೇಮಕಾತಿಯಾಗಬೇಕು. ಇಲ್ಲಿ ವಿಮಾನ ಕಾರ್ಯಾಚರಣೆ ಹಾಗೂ ಏರ್‌ಪೋರ್ಟ್‌ನ ಸಂಪೂರ್ಣ ನಿರ್ವಹಣೆ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ವಹಿಸಲಾಗಿದೆ. ರಾಜ್ಯ ಸರ್ಕಾರದಿಂದ ನಿರ್ವಹಣೆಯಾಗುವ ರಾಜ್ಯದ ಮೊದಲ ಏರ್‌ಪೋರ್ಟ್ ಎಂಬ ಹೆಗ್ಗಳಿಗೆ ಶಿವಮೊಗ್ಗದ್ದಾಗಿದೆ ಎಂದು ಹೇಳಿದರು.
ಆ.11ರಂದು ಶಿವಮೊಗ್ಗ ವಿಮಾನ ನಿಲ್ದಾಣದ ಮೂಲಕ ಜನಸಾಮಾನ್ಯರಿಗೆ ವಿಮಾನ ಯಾನ ಸೌಲಭ್ಯ ದೊರೆಯಲಿದೆ. ಈ ಐತಿಹಾಸಿಕ ಸನ್ನಿವೇಶಕ್ಕೆ ಜಿಲ್ಲೆಯ ರಾಜಕೀಯ ಮುಖಂಡರು ಮತ್ತು ಜನಪ್ರತಿನಿಧಿಗಳೂ ಸಾಕ್ಷಿಯಾಗಲಿದ್ದಾರೆ. ಈಗಿನ ತೀರ್ಮಾನದಂತೆ ಬೆಂಗಳೂರಿನಿಂದ ಹೊರಡುವ ವಿಮಾನವು ಶಿವಮೊಗ್ಗ ನಿಲ್ದಾಣದಲ್ಲಿ ಇಳಿಯಲಿದೆ ಎಂದರು.
ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ ಗುಪ್ತ, ಕೆಎಸ್‌ಐಐಡಿಸಿ ವ್ಮವಸ್ಥಾಪಕ ನಿರ್ದೇಶಕ ಎಂ.ಆರ್.ರವಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್ ಮುಂತಾದವರು ಸಭೆಯಲ್ಲಿದ್ದರು.
ಇದುವರೆಗೆ 12 ಲಕ್ಷ ರೂ. ಆದಾಯ: ಈ ವರ್ಷ ಫೆಬ್ರವರಿಯಲ್ಲಿ ಉದ್ಘಾಟನೆಯಾದ ಶಿವಮೊಗ್ಗ ಏರ್‌ಪೋರ್ಟ್‌ಗೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವ್ಯಾಪಕ ಬೇಡಿಕೆ ಬಂದಿತ್ತು. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಅನೇಕ ನಾಯಕರು, ವಿಮಾನ, ಹೆಲಿಕಾಪ್ಟರ್‌ಗಳ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಇದುವರೆಗೆ ಈ ಏರ್‌ಪೋರ್ಟ್ ಮೂಲಕ 20 ವಿಮಾನಗಳು ಕಾರ್ಯಾಚರಣೆ ನಡೆಸಿವೆ. 12 ಲಕ್ಷ ರೂ. ಆದಾಯ ಸಂಗ್ರಹವಾಗಿದೆ.