Indian Control Room in Mecca: ಸೌದಿ ಅರೇಬಿಯಾದಲ್ಲಿ ವಿಮಾನ ಸಂಚಾರ ವ್ಯತ್ಯಯದಿಂದ ತೊಂದರೆಗೊಳಗಾಗಿರುವ ಭಾರತೀಯರ ನೆರವಿಗೆ ಮೆಕ್ಕಾದಲ್ಲಿ ಹೆಚ್ಚುವರಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ವಿಶೇಷವಾಗಿ ಉಮ್ರಾ ಯಾತ್ರಿಕರಿಗೆ ಅಗತ್ಯ ನೆರವು ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜೆಡ್ಡಾದಲ್ಲಿರುವ ಭಾರತೀಯ ಕಾನ್ಸುಲೇಟ್ ತಿಳಿಸಿದೆ.
ಜೆಡ್ಡಾದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 24 ಗಂಟೆಗಳ ನಿಯಂತ್ರಣ ಕೊಠಡಿಯೂ ಎಂದಿನಂತೆ ಕಾರ್ಯನಿರ್ವಹಿಸಲಿದೆ. ವಿಮಾನಗಳ ರದ್ದತಿ ಮತ್ತು ಸಂಚಾರ ವ್ಯತ್ಯಯದಿಂದ ತೊಂದರೆಗೊಳಗಾಗಿರುವ ಭಾರತೀಯರಿಗೆ ಅಗತ್ಯ ನೆರವು ಒದಗಿಸುವುದು ಈ ಕ್ರಮದ ಉದ್ದೇಶವಾಗಿದೆ.
ಭಾರತದಿಂದ ಸೌದಿ ಅರೇಬಿಯಾಕ್ಕೆ ಹಾಗೂ ಅಲ್ಲಿಂದ ಭಾರತಕ್ಕೆ ಪ್ರಯಾಣಿಸುವವರು, ವಿಶೇಷವಾಗಿ ಜೆಡ್ಡಾ ಮತ್ತು ಮದೀನಾ ಮೂಲಕ ಸಂಚರಿಸುವ ಉಮ್ರಾ ಯಾತ್ರಿಕರು, ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಕಾನ್ಸುಲೇಟ್ ಸೂಚಿಸಿದೆ. ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ವಿಮಾನದ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವಂತೆಯೂ ಸಲಹೆ ನೀಡಿದೆ.
ಪ್ರಯಾಣಿಕರು ವಿಮಾನ ರದ್ದತಿ, ಪ್ರಯಾಣದ ಮರುನಿಗದಿ, ಪರ್ಯಾಯ ಪ್ರಯಾಣ ವ್ಯವಸ್ಥೆ ಮತ್ತು ವಸತಿ ಸೌಲಭ್ಯಗಳ ಕುರಿತು ತಮ್ಮ ಟ್ರಾವೆಲ್ ಏಜೆಂಟ್ಗಳು, ಪ್ರವಾಸ ಆಯೋಜಕರು ಹಾಗೂ ಉಮ್ರಾ ಸೇವಾ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರಬೇಕು ಎಂದು ತಿಳಿಸಲಾಗಿದೆ.
ತೊಂದರೆ ಎದುರಿಸುತ್ತಿರುವ ಭಾರತೀಯರು ಮೆಕ್ಕಾದಲ್ಲಿರುವ ನಿಯಂತ್ರಣ ಕೊಠಡಿಯನ್ನು +966 553646966 ಸಂಖ್ಯೆಯ ಮೂಲಕ ಸಂಪರ್ಕಿಸಬಹುದು ಎಂದು ಕಾನ್ಸುಲೇಟ್ ತನ್ನ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಜೆಡ್ಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ 24 ಗಂಟೆಗಳ ನಿಯಂತ್ರಣ ಕೊಠಡಿಯ ಸಂಪರ್ಕ ವಿವರಗಳು ಹೀಗಿವೆ:
ದೂರವಾಣಿ: +966 12 2614093
ದೂರವಾಣಿ: +966 556122301
ವಾಟ್ಸಾಪ್: +966 536209704
ಇಮೇಲ್: pbskcgi@gmail.com
ಗಲ್ಫ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಯೆಮೆನ್ ಮೂಲದ ಹೂತಿ ಬಂಡುಕೋರರು ನಡೆಸಿದ್ದಾರೆ ಎನ್ನಲಾದ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ವಿಮಾನ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸೌದಿ ಅರೇಬಿಯಾದಲ್ಲಿರುವ ಭಾರತೀಯರು ಸ್ಥಳೀಯ ಅಧಿಕಾರಿಗಳ ಸೂಚನೆ ಪಾಲಿಸುವಂತೆ ರಿಯಾದ್ನ ಭಾರತೀಯ ರಾಯಭಾರ ಕಚೇರಿ ಎಚ್ಚರಿಕೆ ನೀಡಿದೆ. ವೈಮಾನಿಕ ದಾಳಿ ನಡೆದರೆ ಸುರಕ್ಷಿತ ಸ್ಥಳದಲ್ಲಿ ಇರುವಂತೆ ಹಾಗೂ ಘಟನೆಗೆ ಸಂಬಂಧಿಸಿದ ವಿಡಿಯೊ, ಸುದ್ದಿಗಳನ್ನು ಪರಿಶೀಲಿಸದೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಸೂಚಿಸಿದೆ. ಇನ್ನು, ರಿಯಾದ್ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿದ್ದು, ದಮ್ಮಾಮ್, ಜೆಡ್ಡಾ ಮತ್ತು ಮದೀನಾ ವಿಮಾನ ನಿಲ್ದಾಣಗಳಲ್ಲಿ ಕೆಲ ಅಡಚಣೆಗಳೊಂದಿಗೆ ಹಾರಾಟ ಮುಂದುವರಿದಿದೆ ಎಂದು ತಿಳಿಸಿದೆ.
ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ಪ್ರೆಸ್, ಆಕಾಶ ಏರ್ ಮತ್ತು ಇಂಡಿಗೋ ವಿಮಾನಯಾನ ಸಂಸ್ಥೆಗಳು ಅಕ್ಟೋಬರ್ 17ರವರೆಗೆ ಸೌದಿ ಅರೇಬಿಯಾಗೆ ಮತ್ತು ಅಲ್ಲಿಂದ ವಿಮಾನ ಸೇವೆ ಸ್ಥಗಿತಗೊಳಿಸಿವೆ. ಸೌದಿಯಾ ಮತ್ತು ಫ್ಲೈನಾಸ್ ಕೆಲವು ವಿಮಾನಗಳ ಹಾರಾಟ ಮುಂದುವರಿಸಿವೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ಹಾರಾಟದ ಸ್ಥಿತಿ ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ. (ಏಜೆನ್ಸೀಸ್)