Floods: ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ವಾತ್ ನದಿಯ ಉದ್ದಕ್ಕೂ ಭಾರೀ ಮಳೆಯಿಂದ ಉಂಟಾದ ಮಾನ್ಸೂನ್ ಪೂರ್ವದ ಹಠಾತ್ ಪ್ರವಾಹದಿಂದ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದು, ಇನ್ನೂ ಅನೇಕರು ಕಾಣೆಯಾಗಿದ್ದಾರೆ ಎಂದು ಪಾಕ್ ಅಧಿಕಾರಿಗಳು ಶುಕ್ರವಾರ (ಜೂ.27) ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಮಳೆ ಸಂಬಂಧಿತ ಘಟನೆಗಳು 17 ಜನರನ್ನು ಬಲಿ ತೆಗೆದುಕೊಂಡಿವೆ.
ನದಿ ದಂಡೆಯಲ್ಲಿ ಪಿಕ್ನಿಕ್ ಮಾಡುವಾಗ ಕೊಚ್ಚಿ ಹೋದವರನ್ನು ಸುಮಾರು 100 ರಕ್ಷಣಾ ಕಾರ್ಯಕರ್ತರು ಹುಡುಕುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇಲ್ಲಿಯವರೆಗೆ, ಏಳು ಜನರನ್ನು ರಕ್ಷಿಸಿದ್ದಾರೆ ಮತ್ತು ಏಳು ಶವಗಳನ್ನು ಹೊರತೆಗೆದಿದ್ದಾರೆ ಮತ್ತು ಉಳಿದವರನ್ನು ಪತ್ತೆಹಚ್ಚುವ ಪ್ರಯತ್ನಗಳು ಮುಂದುವರೆದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಸ್ವಾತ್ ನದಿಯ ಮಧ್ಯದಲ್ಲಿ ಸಿಲುಕಿಕೊಂಡು, ಸಹಾಯಕ್ಕಾಗಿ ಕೂಗುತ್ತಿರುವ ಪ್ರವಾಸಿಗರ ವಿಡಿಯೋ ವೈರಲ್ ಆಗಿದೆ.
ಸ್ವಾತ್ ನದಿ ದುರಂತದಲ್ಲಿ ಸಂಭವಿಸಿದ ಸಾವುನೋವುಗಳ ಬಗ್ಗೆ ಪ್ರಧಾನಿ ಶೆಹಬಾಜ್ ಷರೀಫ್ ತೀವ್ರ ದುಃಖ ವ್ಯಕ್ತಪಡಿಸಿದ್ದು, ನದಿಗಳು ಮತ್ತು ತೊರೆಗಳ ಬಳಿ ಸುರಕ್ಷತಾ ಕ್ರಮಗಳನ್ನು ಬಲಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. (ಏಜೆನ್ಸೀಸ್)