ಶಿವಮೊಗ್ಗ: ಭಾರತಾಂಬೆ ಸೇವೆ ಮಾಡುವಾಗ ಯುದ್ಧ ಅಥವಾ ಮತ್ತಿತರ ಕಾರ್ಯಾಚರಣೆಗಳಲ್ಲಿ ಹುತಾತ್ಮರಾದರೆ ಅಥವಾ ಶಾಶ್ವತವಾಗಿ ಅಂಗವಿಕಲರಾದರೆ ಅವಲಂಬಿತರಿಗೆ ಧ್ವಜನಿಧಿ ನೆರವಾಗಲಿದೆ ಎಂದು ನಿವೃತ್ತ ಕರ್ನಲ್ ಆನಂದ ರಾವ್ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ 2024ನೇ ಸಾಲಿನ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಅಂಗವಾಗಿ ಧ್ವಜ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹುತಾತ್ಮ ಸೈನಿಕರು ಹಾಗೂ ಅಂಗವಿಕಲರ ಅವಲಂಬಿತರಿಗೆ ಧ್ವಜ ನಿಧಿ ರೂಪದಲ್ಲಿ ಸಂಗ್ರಹಿಸುವ ಮೊತ್ತದಿಂದ ಹಲವು ರೀತಿಯಲ್ಲಿ ಉಪಯೋಗ ಆಗಲಿದೆ. ಆದಕಾರಣ ದೇಶಾದ್ಯಂತ ಈ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದರು.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕ ಡಾ. ಸಿ.ಎ.ಹಿರೇಮಠ ಮಾತನಾಡಿ, ನಾವಿಂದು ಕುಟುಂಬದ ಸದಸ್ಯರೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿರುವುದಕ್ಕೆ ಹಗಲಿರುಳೂ ದೇಶ ಕಾಯುತ್ತಿರುವ ಸೈನಿಕರು ಕಾರಣ. ನಾಡಿನ ಸೇವೆಯ ಸಂದರ್ಭದಲ್ಲಿ ಹಲವು ಸನ್ನಿವೇಶಗಳು ನಡೆಯುತ್ತವೆ. ನಮಗೆ ಅಂತಹ ಸನ್ನಿವೇಶಗಳ ಮಾಹಿತಿಯೇ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಹಲವು ಸೈನಿಕರು ಹುತಾತ್ಮರಾಗುವರು ಹಾಗೂ ಬಹಳಷ್ಟು ಸೈನಿಕರು ತಮ್ಮ ಅಂಗಾಂಗಗಳನ್ನು ಕಳೆದುಕೊಂಡು ಅಸಹಾಯಕರಾಗುವರು. ಅಂತಹ ವೀರ ಸೈನಿಕರ ಕುಟುಂಬ ಹಾಗೂ ಸೈನಿಕರಿಗೆ ಆರ್ಥಿಕವಾಗಿ ಸಹಕರಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ನಾವು ನೇರವಾಗಿ ಅಂತಹ ಸೈನಿಕ ಕುಟುಂಬಗಳಿಗೆ ಯಾವುದೇ ಸಹಾಯ ನೀಡಲಾಗುವುದಿಲ್ಲವಾದ ಕಾರಣ ಇಂತಹ ಧ್ವಜನಿಧಿಯ ರೂಪದಲ್ಲಿ ಸಂಗ್ರಹಿಸಿದ ಮೊತ್ತದಿಂದ ಅವರಿಗೆ ಪರೋಕ್ಷವಾಗಿ ಸಹಕರಿಸಿದಂತಾಗುವುದು ಎಂದು ಹೇಳಿದರು.
ಇಸಿಎಚ್‌ಎಸ್ ಪಾಲಿಕ್ಲಿನಿಕ್ ಅಧಿಕಾರಿಗಳಾದ ನಿವೃತ್ತ ಕರ್ನಲ್ ಜಗದೀಶ್, ನಿವೃತ್ತ ಮಾಜಿ ಸೈನಿಕರಾದ ಉಮೇಶ್ ಬಾಪಟ್, ಕೆ.ಎಸ್.ಉದಯ, ದಿನೇಶ್, ಸತ್ಯನಾರಾಯಣ, ವಿ.ಎನ್.ಮೂರ್ತಿ, ಪಿ.ಜಿ.ಅನಿಲ್, ನೇಮೋಜಿ, ಶ್ರೀನಾಥ್, ರಾಮನಾಥ, ಯೋಗಾನಂದ್, ರಾಮಪ್ಪ, ಸಮೀವುಲ್ಲಾ, ಯೋಗೇಂದ್ರ, ಪಿ.ವೈ.ರವಿ ಹಾಗೂ ಇನ್ನೂ ಅನೇಕ ಮಾಜಿ ಸೈನಿಕರು ಉಪಸ್ಥಿತರಿದ್ದರು.