ವೇತನ ತಾರತಮ್ಯ ಸರಿಪಡಿಸಬೇಕು ಎಂದು ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರು ಸಾಗರದ ಮುಖ್ಯ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಂಜಪ್ಪ, ಸುಬ್ರಹ್ಮಣ್ಯ, ಪುಂಡಲೀಕ ಚೌಧರಿ, ಸಚಿನ್ ಇತರರಿದ್ದರು.  
ನ್ಯೂಸ್

ವೇತನ ತಾರತಮ್ಯ ಸರಿಪಡಿಸಿ

ಶಿವಕುಮಾರ ಎಸ್.ಪಿ.

ಸಾಗರ: ಗ್ರಾಮೀಣ ಅಂಚೆ ನೌಕರರಿಗೆ ಆಗಿತ್ತಿರುವ ವೇತನ ತಾರತಮ್ಯ ಸರಿಪಡಿಸಬೇಕು ಎಂದು ಆಗ್ರಹಿಸಿ ಅಂಚೆ ನೌಕರರ ಸಂಘದ ಪದಾಧಿಕಾರಿಗಳು ಮುಖ್ಯ ಅಂಚೆ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಹಲವು ವರ್ಷಗಳಿಂದ ಗ್ರಾಮೀಣ ಅಂಚೆ ನೌಕರರು, ಪಾಲಕರ ಬೇಡಿಕೆಗಳನ್ನು ಈಡೇರಿಸದೆ ಶೋಷಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ವ್ಯಾಪ್ತಿಯ ಇತರೆ ಇಲಾಖೆಗಳಿಗೆ 8ನೇ ವೇತನ ಆಯೋಗ ಜಾರಿ ಮಾಡಿದ್ದರೂ ಗ್ರಾಮೀಣ ಅಂಚೆ ನೌಕರರಿಗೆ ಜಾರಿಗೊಳಿಸದೆ ತಾರತಮ್ಯ ಮಾಡಲಾಗುತ್ತಿದೆ. ಹಿಂದಿನ ಬಾರಿಯೂ ಎರಡೂವರೆ ವರ್ಷದ ನಂತರ ವೇತನ ಪರಿಷ್ಕರಣೆ ಮಾಡಲಾಗಿತ್ತು ಎಂದು ದೂರಿದರು.

ರಮೇಶ್ಚಂದ್ರ ಆಯೋಗದ ವರದಿ ಜಾರಿಗೆ ಒತ್ತಾಯಿಸಿದ್ದರೂ ಕ್ರಮ ಕೈಗೊಂಡಿಲ್ಲ. ಅಂಚೆ ನೌಕರರಿಗೆ 5ರಿಂದ 8 ತಾಸು ಕರ್ತವ್ಯ ಅವಧಿಯನ್ನು ಹೆಚ್ಚಿಸಿ ವೇತನ ಜಾಸ್ತಿ ಮಾಡಬೇಕೆಂಬ ಕೂಗಿಗೆ ಈತನಕ ಬೆಲೆ ಸಿಕ್ಕಿಲ್ಲ. 65 ವರ್ಷ ಸೇವೆ ಸಲ್ಲಿಸಿ ಗ್ರಾಮೀಣ ಅಂಚೆ ನೌಕರರು ಬರಿಗೈನಲ್ಲಿ ಮನೆಗೆ ಹೋಗಬೇಕು. ಅವರಿಗೆ ಯಾವುದೇ ರೀತಿಯ ಪಿಂಚಣಿ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡನೀಯ. ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳು ನಮ್ಮ ಸಂಘಟನೆಯನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ತಂತಿ ಇಲಾಖೆಯನ್ನು ಹೊರಗೆ ಹಾಕಲಾಗಿದೆ. ಈಗ ಅಂಚೆಪಾಲಕರನ್ನು ಹೊರಗೆ ಹಾಕುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.

ಸಂಘದ ಅಧ್ಯಕ್ಷ ಮಂಜಪ್ಪ ಖಂಡಿಕಾ, ಸಾಗರ ತಾಲೂಕು ಗ್ರಾಮೀಣ ಅಂಚೆ ನೌಕರರ ಸಂಘದ ಸುಬ್ರಹ್ಮಣ್ಯ ಕಾರ್ಗಲ್, ಪುಂಡಲೀಕ ಚೌಧರಿ, ಸಚಿನ್, ಲೋಕೇಶ್, ವೀಣಾ, ಇಸಾರತ್, ಸೂರಜ್ ಬೊಂಬರೆ ಇತರರಿದ್ದರು.