ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ. ತಾಂತ್ರಿಕ ಸಮಸ್ಯೆ, ಅಧಿಕಾರಿಗಳ ಬೇಜವಾಬ್ದಾರಿತನ, ಸಿಬ್ಬಂದಿಯ ನಿರ್ಲಕ್ಷ್ಯ, ವಿಳಂಬ ಧೋರಣೆ ಮುಂತಾದ ಕಾರಣಗಳಿಂದ ಜನಸಾಮಾನ್ಯರು ದಿನನಿತ್ಯದ ಕೆಲಸಗಳಿಗಾಗಿ ಪರದಾಡುವಂತಾಗಿದೆ. ಸಮಯ ಮತ್ತು ಶ್ರಮ ಎರಡೂ ವ್ಯರ್ಥವಾಗುತ್ತಿದ್ದು, ಜನರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಪರಿಹಾರದ ನಿಟ್ಟಿನಲ್ಲಿ ಅಗತ್ಯ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಸ್ವತ್ತುಗಳ ನೋಂದಣಿ ಸಮಸ್ಯೆ ನಿವಾರಿಸುವ ಆಶಯ ಮತ್ತು ಆಡಳಿತದಲ್ಲಿ ಪಾರದರ್ಶಕತೆ, ವೇಗ ತರುವ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಜಾರಿಗೆ ತರಲಾದ ಕಾವೇರಿ 2.0 ತಂತ್ರಾಂಶವೇ ಈಗ ಸಮಸ್ಯೆ ಸೃಷ್ಟಿಸಿರುವುದು ವಿಪರ್ಯಾಸ.
ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಹಯೋಗದಲ್ಲಿ 256 ಉಪ ನೋಂದಣಿ ಕೇಂದ್ರಗಳಲ್ಲಿ 2023ರ ಜೂನ್-ಜುಲೈ ತಿಂಗಳಲ್ಲಿ ಈ ತಂತ್ರಾಂಶ ಅಳವಡಿಸಲಾಗಿದೆಯಾರೂ, ಇದು ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಜನರು ಪ್ರತಿನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಕಾವೇರಿ 2.0 ತಂತ್ರಾಂಶದಲ್ಲಿ ಜೂನ್ 13ರಿಂದಲೇ ದೋಷ ಕಂಡುಬಂದಿದ್ದು, ಜನರು ಕಚೇರಿ ಬಾಗಿಲು ಕಾಯುವಂತಾಗಿದೆ. ಸರ್ವರ್ ಡೌನ್ ಎಂಬ ಫಲಕಗಳು ಉಪನೋಂದಣಿ ಕಚೇರಿಗಳಲ್ಲಿ ಕಾಯಂ ಆಗಿವೆ. ಯಾವ ತಂತ್ರಾಂಶದಲ್ಲಿ ತಾಂತ್ರಿಕ ದೋಷ ಇದೆ ಎಂಬುದು ಜನರಿಗೆ ಮುಖ್ಯವಲ್ಲ. ಒಟ್ಟಾರೆ ನೋಂದಣಿ ಪ್ರಕ್ರಿಯೆ ಸುಗಮವಾಗಿ ಆಗಬೇಕು.
ಜನಸ್ನೇಹಿ ಆಡಳಿತಕ್ಕಾಗಿ ಕಾಲಕಾಲಕ್ಕೆ ತಂತ್ರಜ್ಞಾನದ ನೆರವು ಪಡೆಯುವುದು ಅನಿವಾರ್ಯ. ಕಾವೇರಿ-1 ತಂತ್ರಾಂಶವನ್ನು ಪೂರ್ಣವಾಗಿ ತೆಗೆದುಹಾಕಿದ ಬಳಿಕ ಹೊಸ ತಂತ್ರಾಂಶ ಸಮರ್ಪಕವಾಗಿ ಕಾರ್ಯನಿರ್ವಹಿಸಲಿದೆ ಎಂಬ ನಂಬಿಕೆ ಹುಸಿಯಾಗಿದೆ. ಜನರು ಸಂದೇಹ ಪರಿಹರಿಸಿಕೊಳ್ಳಲು ಸಂಬಂಧಿತ ಕಚೇರಿಗೆ ಸಂರ್ಪಸಿದರೆ ಸಿಬ್ಬಂದಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿವೆ. ಸಿಟಿಜನ್ ಲಾಗಿನ್ನಲ್ಲಿ ತಾಂತ್ರಿಕ ತೊಂದರೆ ಉಂಟಾಗುತ್ತಿದ್ದು, ಆನ್ಲೈನ್ನಲ್ಲಿ ಹಣ ಪಾವತಿ ಮಾಡುವಾಗಲೂ ಸಮಸ್ಯೆಯಾಗುತ್ತಿದೆ. ಸಾಫ್ಟ್ವೇರ್ ಅಪ್ಗ್ರೇಡ್ ಮಾಡಿದ್ದರೂ, ಅರ್ಧದಲ್ಲೇ ಪ್ರಕ್ರಿಯೆ ಮೊಟಕುಗೊಳ್ಳುತ್ತಿದ್ದು, ತುಂಬಿದ ಮಾಹಿತಿಗಳು ಅಳಿಸಿ ಹೋಗುತ್ತಿವೆ. ಇಂಥ ಸಮಸ್ಯೆಯಿಂದ ಸರ್ಕಾರದ ವರಮಾನಕ್ಕೂ ಹೊಡೆತ ಬೀಳುತ್ತದೆ. ಹೊಸ ತಂತ್ರಾಂಶದ ಅನುಷ್ಠಾನವೇನೋ ಸರಿ; ಆದರೆ ಕ್ಷೇತ್ರ ಪರಿಣಿತರ ನೆರವನ್ನು ಪಡೆದು ತಾಂತ್ರಿಕ ಅಡಚಣೆಗಳನ್ನು ನಿವಾರಿಸಿದರೆ ಮಾತ್ರ ಇದರಿಂದ ಜನರಿಗೆ ಅನುಕೂಲ. ವಹಿವಾಟಿನ ಪ್ರಮಾಣಕ್ಕೆ ತಕ್ಕಂತೆ ಅಧಿಕ ಸಾಮರ್ಥ್ಯದ ಸರ್ವರ್ ಬೇಕಾಗುತ್ತದೆ. ಇನ್ನಾದರೂ ಸರ್ಕಾರ ಸಮಸ್ಯೆಗಳನ್ನು ಬಗೆಹರಿಸುವ ಇಚ್ಛಾಶಕ್ತಿ ಪ್ರದರ್ಶಿಸಲಿ. ನೋಂದಣಿ ಪ್ರಕ್ರಿಯೆಗೆ ವೇಗ ನೀಡಿ, ಜನಸಾಮಾನ್ಯರ ಪರದಾಟ ತಪ್ಪಿಸಲಿ.