ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಸುಗೂ ಪ್ರದೇಶದಲ್ಲಿ ಬುಧವಾರ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಐವರು ಉಗ್ರರು ಭದ್ರತಾ ಪಡೆಯ ಗುಂಡೇಟು ತಗುಲಿ ಮೃತಪಟ್ಟಿದ್ದಾರೆ. ಪೊಲೀಸರು ಮತ್ತು ಸೇನಾಪಡೆ ಜಂಟಿಯಾಗಿ ನಡೆಸುತ್ತಿರುವ ಈ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಕದನ ವಿರಾಮ ಉಲ್ಲಂಘನೆ ಭಾರತದ ಗಡಿಭಾಗದಲ್ಲಿ ನೌಶೇರಾ ಎಂಬಲ್ಲಿ ಪಾಕಿಸ್ತಾನದ ಸೇನಾಪಡೆ ಕದನ ವಿರಾಮ ಉಲ್ಲಂಘಿಸಿ ಬುಧವಾರ ಬೆಳಗ್ಗೆ ಗುಂಡಿನ ದಾಳಿ ನಡೆಸಿತ್ತು. ಭಾರತೀಯ ಸೇನಾಪಡೆಯೂ ಇದಕ್ಕೆ ಪ್ರತಿದಾಳಿ ನಡೆಸಿದೆ. ಬೆಳಗ್ಗೆ 7.30ಕ್ಕೆ ಈ ದಾಳಿ ನಡೆದಿತ್ತು ಎಂದು ಸೇನಾ ಮೂಲಗಳು ತಿಳಿಸಿವೆ.
ಸುಗೂ ಪ್ರದೇಶದಲ್ಲಿ ನಸುಕಿನ 1.45ರ ಹೊತ್ತಿಗೆ ಕಾರ್ಯಾಚರಣೆ ಪ್ರಗತಿ ಸಾಧಿಸಿದ್ದು, ಬೆಳಗ್ಗೆ 5.30ಕ್ಕೆ ಉಗ್ರರು ಹತರಾಗಿದ್ದಾರೆ. ಶೋಪಿಯಾನ್ ಜಿಲ್ಲೆಯ ಸುಗೂ ಪ್ರದೇಶದಲ್ಲಿ ಕಳೆದ 72 ಗಂಟೆಗಳ ಅವಧಿಯಲ್ಲಿ ಇದು ಮೂರನೇ ಆಪರೇಶನ್. ಸೋಮವಾರ ಭದ್ರತಾ ಪಡೆಗಳು ಹಿಜ್ಬುಲ್ ಮುಜಾಹಿದ್ದಿನ್ಗೆ ಸೇರಿದ ನಾಲ್ವರು ಉಗ್ರರನ್ನು ಹೊಡೆದುರುಳಿಸಿದರೆ ಭಾನುವಾರ ಐವರು ಉಗ್ರರನ್ನು ರೆಬಾನ್ ಪ್ರದೇಶದಲ್ಲಿ ಹತ್ಯೆ ಮಾಡಿದ್ದವು.
ಇದನ್ನೂ ಓದಿ: ರಾಜಧಾನಿಯಲ್ಲಿ 500 ಗಡಿ ದಾಟಿದ ಕರೊನಾ
ನಿನ್ನೆ ಮತ್ತು ಇಂದು ಎರಡು ದಿನಗಳಲ್ಲಿ ಹಿಜ್ಬುಲ್ ಮುಜಾಹಿದ್ದೀನ್ಗೆ ಸೇರಿದ 9 ಉಗ್ರರು ಭದ್ರತಾ ಪಡೆ ಗುಂಡೇಟಿಗೆ ಸಿಲುಕಿ ಹತರಾಗಿದ್ದಾರೆ. ಕಳೆದ ಎರಡು ವಾರಗಳ ಅವಧಿಯಲ್ಲಿ ಈ ಪ್ರದೇಶದಲ್ಲಿ ಒಟ್ಟು 9 ಆಪರೇಶನ್ಗಳಾಗಿದ್ದು, 22 ಉಗ್ರರು ಕೊಲ್ಲಲ್ಪಟ್ಟಿದ್ದಾರೆ. ಇವರಲ್ಲಿ ಆರು ಉಗ್ರರು ಉಗ್ರಸಂಘಟನೆಯ ಟಾಪ್ ಕಮಾಂಡರ್ಗಳಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. (ಏಜೆನ್ಸೀಸ್)