ನ್ಯೂಸ್

ದೆಹಲಿಯಲ್ಲಿ ಐವರು ಶಂಕಿತ ಉಗ್ರರ ಬಂಧನ, ಶಸ್ತ್ರಾಸ್ತ್ರ ವಶಕ್ಕೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಶಕರಪುರ ಪ್ರದೇಶದಲ್ಲಿದ್ದ ಐವರು ಶಂಕಿತ ಉಗ್ರರನ್ನು ವಿಶೇಷ ಪೊಲೀಸ್ ಪಡೆದ ಸೋಮವಾರ ಬಂಧಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಬಂಧಿತರಲ್ಲಿ ಮೂವರು ಕಾಶ್ಮೀರದವರಾದರೆ, ಇಬ್ಬರು ಪಂಜಾಬಿನವರು. ಉಗ್ರ ಸಂಘಟನೆಯ ಹೆಸರನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.

ಖಲಿಸ್ತಾನ್ ಸಂಘಟನೆ ಜತೆಗೆ ನಂಟು ಹೊಂದಿರುವ ಈ ಶಂಕಿತರ ಬಳಿ ಶಸ್ತ್ರಾಸ್ತ್ರಗಳು ಮತ್ತು ಇತರೆ ದಾಖಲೆಗಳಿದ್ದವು. ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳ ವಿಚಾರಣೆ ತೀವ್ರಗೊಳಿಸಿದ್ದಾರೆ. ಬಂಧಿತರನ್ನು ಕಾಶ್ಮೀರ ಮೂಲದ ಶಬ್ಬೀರ್ ಅಹ್ಮದ್​, ಅಯೂಬ್ ಪಠಾಣ್​, ರಿಯಾಜ್​ ಹಾಗೂ ಪಂಜಾಬ್​ ಮೂಲದ ಗುರ್ಜೀತ್ ಸಿಂಗ್​, ಸುಖ್​ದೀಪ್ ಸಿಂಗ್ ಎಂದು ಗುರುತಿಸಲಾಗಿದೆ.

ನಾರ್ಕೋಟೆರರಿಸಂನಲ್ಲಿ ಈ ಗುಂಪಿಗೆ ಪಾಕಿಸ್ತಾನದ ಐಎಸ್​ಐ ಬೆಂಬಲವಿದೆ. ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಶಂಕಿತ ಐವರು ಉಗ್ರರು ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದರು. ಕೂಡಲೇ ಪ್ರತಿದಾಳಿ ನಡೆಸಿ ಅವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಪ್ರಮೋದ್ ಸಿಂಗ್ ಕುಶ್ವಾಹ್ ತಿಳಿಸಿದ್ದಾರೆ. (ಏಜೆನ್ಸೀಸ್)