ನ್ಯೂಸ್

ಕೋಣೆಯಲ್ಲಿ ನೇತಾಡುತ್ತಿತ್ತು ಯಜಮಾನನ ಶವ; ನೆಲದ ಮೇಲಿತ್ತು ಮಕ್ಕಳು-ಪತ್ನಿ ಸೇರಿ ನಾಲ್ವರ ಮೃತದೇಹ!

ತಿರುವನಂತಪುರ: ಮನೆಮಂದಿಯೆಲ್ಲ ಸಾವಿಗೀಡಾದಂಥ ಪ್ರಕರಣವಿದು. ಮನೆಯ ಯಜಮಾನನ ಶವ ಕೋಣೆಯಲ್ಲಿ ನೇತಾಡುತ್ತಿದ್ದರೆ, ಮನೆಯಲ್ಲಿದ್ದ ಇನ್ನು ನಾಲ್ವರು ನೆಲದ ಮೇಲೆ ಹೆಣಗಳಾಗಿ ಬಿದ್ದಿದ್ದರು.

ಕೇರಳದ ತಿರುವನಂತಪುರದ ಕಲ್ಲಂಬಲಂ ಎಂಬಲ್ಲಿನ ಮನೆಯೊಂದರಲ್ಲಿ ಶನಿವಾರ ಬೆಳಗ್ಗೆ ಇಂಥದ್ದೊಂದು ದೃಶ್ಯ ಕಂಡುಬಂದಿದೆ. ಮನೆ ಯಜಮಾನ, ಆತನ ಪತ್ನಿ, ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳು ಹಾಗೂ ಇನ್ನೊಬ್ಬ ಮಹಿಳೆ ಸಾವಿಗೀಡಾಗಿದವರು. ಹತ್ತಿರದ ಸಂಬಂಧಿಕರೊಬ್ಬರು ಬೆಳಗ್ಗೆ ಮನೆಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಉಳಿದ ನಾಲ್ವರಿಗೆ ವಿಷ ಕುಡಿಸಿ ಮನೆ ಯಜಮಾನ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಈ ಐವರ ಸಾವಿಗೆ ಕಾರಣ ಏನು ಎಂಬುದು ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ. ಆರ್ಥಿಕ ಮುಗ್ಗಟ್ಟನ್ನು ಎದುರಿಸಲಾಗದೆ ಈ ರೀತಿ ಸಾವಿಗೆ ಶರಣಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.