ನ್ಯೂಸ್

ಐವರು ಎಲ್​ಇಟಿ ಉಗ್ರವಾದಿಗಳ ಅಂತ್ಯ; ಓರ್ವ ಸೈನಿಕ ಹುತಾತ್ಮ

ಪುಲ್ವಾಮ : ಲಷ್ಕರ್​-ಎ-ತೈಬಾ(ಎಲ್​​ಇಟಿ)ಗೆ ಸೇರಿದ ಐವರು ಉಗ್ರವಾದಿಗಳಿಗೆ ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭಾರತದ ಭದ್ರತಾ ಪಡೆಯ ಸೈನಿಕರು ಅಂತ್ಯ ಹಾಡಿದ್ದಾರೆ. ಈ ಸಂಬಂಧ ಇಂದು ನಡೆದ ಗುಂಡಿನ ಕಾಳಗದಲ್ಲಿ ಒಬ್ಬ ಭಾರತೀಯ ಸೈನಿಕನಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಸುಳಿವಿನ ಆಧಾರದ ಮೇಲೆ ಪುಲ್ವಾಮದ ರಾಜಪೋರ ವಿಭಾಗದ ಹಂಜನ್ ಎಂಬ ಗ್ರಾಮದಲ್ಲಿ ಭದ್ರತಾ ಪಡೆಯು ನಿನ್ನೆ ರಾತ್ರಿ ಪತ್ತೆ ಕಾರ್ಯಾಚರಣೆ ಆರಂಭಿಸಿತು. ಬಚ್ಚಿಟ್ಟುಕೊಂಡಿದ್ದ ಉಗ್ರವಾದಿಗಳು ಸೇನಾಧಿಕಾರಿಗಳ ಮೇಲೆ ಗುಂಡು ಚಲಾಯಿಸಿದ ಪ್ರಯುಕ್ತ ಇಂದು ಉಭಯಪಕ್ಷದಿಂದ ಗುಂಡಿನ ಚಕಮಕಿ ನಡೆಯಿತು ಎನ್ನಲಾಗಿದೆ.

ಸೇನೆಯ ಗುಂಡು ತಿಂದು ಮೃತಪಟ್ಟ ಐವರು ಉಗ್ರವಾದಿಗಳಲ್ಲಿ ಎಲ್​​ಇಟಿಯ ಜಿಲ್ಲಾ ಕಮ್ಯಾಂಡರ್​ ಆಗಿದ್ದ ನಿಶಾಜ್​ ಲೋನೆ ಮತ್ತು ಒಬ್ಬ ಪಾಕಿಸ್ತಾನಿ ಉಗ್ರವಾದಿ ಸೇರಿದ್ದರು. ಕಾರ್ಯಾಚರಣೆಯು ಸಫಲವಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್​ ಕುಮಾರ್​ ಹೇಳಿದ್ದಾರೆ. (ಏಜೆನ್ಸೀಸ್)