ನ್ಯೂಸ್

ಐನೂರು ರೂ. ಕೊಡುವ ನೆಪದಲ್ಲಿ

ಬೆಂಗಳೂರು: ದೇವಸ್ಥಾನ ಸ್ವಚ್ಛ ಮಾಡುವ ವೃದ್ಧೆಗೆ 500 ರೂ. ಕೊಡುವ ನೆಪದಲ್ಲಿ 50 ಗ್ರಾಂ ಚಿನ್ನದ ಸರವನ್ನು ಪಡೆದು ವಂಚಕನೊಬ್ಬ ಮೋಸ ಮಾಡಿದ್ದಾನೆ.

ವಿದ್ಯಾರಣ್ಯಪುರದ ಚಾಮುಂಡೇಶ್ವರಿನಗರ ನಿವಾಸಿ ಅಮ್ಮಯಮ್ಮ (70) ಮೋಸಕ್ಕೆ ಒಳಗಾದ ವೃದ್ಧೆ. ನ್ಯೂ ಬಿಇಎಲ್ ರಸ್ತೆ ದೇವಸಂದ್ರದ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಸ್ವಚ್ಛತೆ ಕೆಲಸ ಮಾಡಿಕೊಂಡು ಅಮ್ಮಯಮ್ಮ, ಮಗನೊಂದಿಗೆ ನೆಲೆಸಿದ್ದರು. ನ.25ರ ಬೆಳಗ್ಗೆ 10.30ರಲ್ಲಿ ಅಪರಿಚಿತ ವ್ಯಕ್ತಿ, ದೇವಸ್ಥಾನಕ್ಕೆ ಬಂದು ಚಿನ್ನದ ಅಂಗಡಿ ತೆರೆಯಲು ಉದ್ದೇಶಿಸಿದ್ದೆನೆ ಎಂದು ಹೇಳಿದ್ದಾನೆ.

ಬಳಿಕ ಅಲ್ಲಿಯೇ ಇದ್ದ ವೃದ್ಧೆಗೆ 500 ರೂ. ಮತ್ತು ಪೂಜಾರಿಗೆ 500 ರೂ. ಕೊಟ್ಟಿದ್ದಾನೆ. ಮತ್ತೆ ವೃದ್ಧೆಗೆ ಕೊಟ್ಟಿದ್ದ 500 ರೂ. ಅನ್ನು ವಾಪಸ್ ಪಡೆದು ನಿಮ್ಮ ಚಿನ್ನದ ಸರವನ್ನು ಒಮ್ಮೆ ಮುಟ್ಟಿ ಕೊಡುತ್ತೆನೆ ಎಂದು ಹೇಳಿದ್ದಾನೆ. ಆಗ ವೃದ್ಧೆ, 50 ಗ್ರಾಂ ಸರ ಬಿಚ್ಚಿ ಅಪರಿಚಿತ ವ್ಯಕ್ತಿ ಕೈಗೆ ಕೊಟ್ಟಿದ್ದಾಳೆ.

ಆತ 500 ರೂ. ನೋಟಿನಲ್ಲಿ ಚಿನ್ನದ ಸರವನ್ನು ಸುತ್ತಿ ಅಲ್ಲಿಯೇ ಇಟ್ಟು ಅದನ್ನು ಬ್ಯಾಗ್ ಒಳಗೆ ಹಾಕಿಕೊಳ್ಳುವಂತೆ ಹೇಳಿದ್ದಾನೆ. ಅಮ್ಮಯಮ್ಮ, ಅದನ್ನು ಬ್ಯಾಗ್ ಒಳಗೆ ಹಾಕಿಕೊಂಡಿದ್ದು, ಇತ್ತ ಆರೋಪಿ ಅಲ್ಲಿಂದ ಹೊರಟು ಹೋಗಿದ್ದಾನೆ. ಸ್ವಲ್ಪ ಹೊತ್ತಿಗೆ ಬ್ಯಾಗ್ ಒಳಗೆ ಹಾಕಿಕೊಂಡಿದ್ದ ಸರವನ್ನು ನೋಡಿಕೊಂಡಾಗ ಕೇವಲ 500 ರೂ. ನೋಟು ಪತ್ತೆಯಾಗಿದ್ದು, ಅದರಲ್ಲಿ ಚಿನ್ನದ ಸರ ಇರಲಿಲ್ಲ.

ಗಾಬರಿಗೊಂಡು ವೃದ್ಧೆ ಅಪರಿಚಿತ ವ್ಯಕ್ತಿಯನ್ನು ಎಲ್ಲೆಡೆ ಹುಡುಕಾಟ ನಡೆಸಿ ಕೊನೆಗೆ ಸದಾಶಿವನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಸಿಕೊಂಡು ಆರೋಪಿಯ ಬಂಧನಕ್ಕೆ ಬಲೆಬೀಸಿದ್ದಾರೆ.