ಕೊತ್ತೂರು ಜಿ.ಮಂಜುನಾಥ್​ 
ನ್ಯೂಸ್

ಕೊಟ್ಟ ಮಾತಿನಂತೆ ಐದೂ ಗ್ಯಾರಂಟಿ ಜಾರಿ

ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳು ಕಳೆದಿದ್ದು, ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳಿಂದ ಯಾರೂ ವಂಚಿತರಾಗದಂತೆ ಎಚ್ಚರ ವಹಿಸಲಾಗುವುದು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಜತೆಗೆ ಜನ ಸ್ನೇಹಿ ಆಡಳಿತ ನೀಡುವುದು ನನ್ನ ಗುರಿ ಎಂದರು.
ಗ್ಯಾರಂಟಿ ಯೋಜನೆ ಜಾರಿಯಿಂದ ಬಡವರಿಗೆ ಬಹಳ ನೆರವಾಗಿದೆ. ಮುಂಬರುವ ಲೋಕಸಭೆ ಚುನಾವಣೆ ಎದುರಿಸಲು ಸ್ಫೂರ್ತಿ ತುಂಬಿದೆ. ಕೋಲಾರ ಲೋಕಸಭೆ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್​ ಹೆಚ್ಚು ಸ್ಥಾನ ಗೆಲ್ಲಲಿದೆ. ಈವರೆಗಿನ ಕೆಲಸಗಳು ನನಗೆ ಶೇ.100ರಷ್ಟು ತೃಪ್ತಿ ತಂದಿದೆ ಎಂದು ತಿಳಿಸಿದರು.
ನಗರ ಹಾಗೂ ಗ್ರಾಮಾಂತರದ ಭಾಗದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಮಾಲೂರು ರಸ್ತೆಯಲ್ಲಿ ಎಪಿಎಂಸಿಯಿಂದ ಕೋಲಾರ ತಾಲೂಕಿನ ಗಡಿ ಪ್ರದೇಶದವರೆಗೆ ಡಾಂಬರೀಕರಣ ಮಾಡಲಾಗಿದೆ. ಎಪಿಎಂಸಿ ಬಳಿ ಮೋರಿವರೆಗೆ ಕಾಂಕ್ರೀಟ್​ ರಸ್ತೆ ನಿರ್ಮಿಸಲಾಗುತ್ತಿದೆ. ಟೇಕಲ್​ ರಸ್ತೆಗೂ ಡಾಂಬರೀಕರಣ ನಡೆದಿದೆ ಎಂದರು.
ಕೋಲಾರ& ಬೆಂಗಳೂರು ರಸ್ತೆಯಿಂದ ತೇರಹಳ್ಳಿ ಬೆಟ್ಟದ ರಸ್ತೆಯನ್ನು 3.60 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕೋಲಾರಮ್ಮ, ಸೋಮೇಶ್ವರ ದೇಗುಲದ ಸುತ್ತಮುತ್ತಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯೋಜನೆ ಹಾಕಿಕೊಂಡಿದ್ದು, ಇನ್ನು ಆರು ತಿಂಗಳಲ್ಲಿ ಬದಲಾವಣೆಯಾಗಲಿದೆ ಎಂದು ಹೇಳಿದರು.
ನಗರದ ಕಾರಂಜಿ ಕಟ್ಟೆಯ ದ್ರೌಪದಾಂಬಾ ದೇವಾಲಯದ ಬಳಿ ಖಾದ್ರಿಪುರ ರಸ್ತೆ ಅಭಿವೃದ್ಧಿಯನ್ನು 30 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಅಂತರಗಂಗೆ ರಸ್ತೆ ಅಭಿವೃದ್ಧಿ ಮುಗಿದಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ನಗರದ ಎಲ್ಲಾ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಯುಜಿಡಿ ಸಮಸ್ಯೆ ಸಮಸ್ಯೆ ಸರಿಪಡಿಸಿ, ಬೀದಿ ದೀಪ ಕಲ್ಪಿಸಿ ನಗರದಲ್ಲಿನ ಸೌಲಭ್ಯ ಕೊರತೆಗಳನ್ನು ನೀಗಿಸಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಮೆಕ್ಕೆ ವೃತ್ತದ ಬಳಿ ಮಿನಿ ವಿಧಾನಸೌಧ ಪಕ್ಕ ನಗರಸಭೆಯ ನೂತನ ಕಟ್ಟಡ ನಿಮಾರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. 7.83 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ತಲೆ ಎತ್ತಲಿದೆ. ಇದು ಬಹಳ ವರ್ಷಗಳ ಕನಸು ಅಗಲಿದೆ ಎಂದರು. ಜಲಜೀವನ ಮಿಷನ್​ ಟೆಂಡರ್​ ಆಗಿ ಕೆಲಸ ಶುರುವಾಗಿದೆ. ಇಡೀ ಜಿಲ್ಲೆಯಲ್ಲಿ ತಾಲೂಕಿನಲ್ಲಿ ಮಾತ್ರ ಟೆಂಡರ್​ ಆಗಿದೆ. ಕ್ಯಾಲನೂರು ಭಾಗದಲ್ಲಿಯೇ ಸುಮಾರು 6 ಕೋಟಿ ರೂ. ವೆಚ್ಚದ ಟೆಂಡರ್​ ಆಗಿದೆ ಎಂದು ಮಾಹಿತಿ ನೀಡಿದರು.