ನ್ಯೂಸ್

ಪ್ಯಾಲೆಸ್ಟೈನ್​ನ ಗಾಜಾದಲ್ಲಿ ಇಸ್ರೇಲ್ ದಾಳಿಗೆ ಅಲ್ ಜಜೀರಾದ ಐವರು ಪತ್ರಕರ್ತರು ಬಲಿ| Al Jazeera

Al Jazeera: ಭಾನುವಾರ ಪ್ಯಾಲೆಸ್ಟೈನ್​ನ ಗಾಜಾ ನಗರದಲ್ಲಿ ಅಲ್ ಜಜೀರಾ ಟಿವಿ ವಾಹಿನಿಯ ಟೆಂಟ್ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದ್ದು, ಓರ್ವ ಪ್ರಮುಖ ವರದಿಗಾರ ಸೇರಿ ಐವರು ಪತ್ರಕರ್ತರು ಮೃತಪಟ್ಟಿರುವ ಘಟನೆ ಸೋಮವಾರ(ಆಗಸ್ಟ್​ 11) ವರದಿಯಾಗಿದೆ.

ಇಸ್ರೇಲಿ ಸೇನೆಯು ದಾಳಿಯನ್ನು ನಡೆಸಿರುವುದಾಗಿ ದೃಢಪಡಿಸಿದ್ದು, ಹಮಾಸ್ ಜೊತೆ ಸಂಬಂಧ ಹೊಂದಿದ್ದ ಅಲ್ ಜಜೀರಾದ ಅಲ್-ಶರೀಫ್ ಮೇಲೆ ದಾಳಿ ನಡೆಸಿರುವುದಾಗಿ ಹೇಳಿದ್ದು, ಪತ್ರಕರ್ತನಂತೆ ನಟಿಸಿದ ಆತನನ್ನು ಭಯೋತ್ಪಾದಕ ಎಂದು ಕರೆದಿದೆ.

ಈ ಕುರಿತು ಮಾಹಿತಿ ನೀಡಿರುವ ಅಲ್​ ಜಜೀರಾ ಸಂಸ್ಥೆ, "ಗಾಜಾದಲ್ಲಿ ಪತ್ರಕರ್ತರಿಗೆ ವಸತಿ ಕಲ್ಪಿಸಲಾಗಿದ್ದ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅಲ್ ಜಜೀರಾ ಪತ್ರಕರ್ತ ಅನಸ್ ಅಲ್-ಶರೀಫ್ ಮತ್ತು ಅವರ ನಾಲ್ವರು ಸಹೋದ್ಯೋಗಿಗಳು ಸಾವನ್ನಪ್ಪಿದ್ದಾರೆ" ಎಂದು ಹೇಳಿದೆ.

ಅಲ್ ಶರೀಫ್ ಜೊತೆಗೆ ವರದಿಗಾರ ಮೊಹಮ್ಮದ್ ಕ್ರೈಖೆಹ್ ಮತ್ತು ಕ್ಯಾಮೆರಾ ಆಪರೇಟರ್‌ಗಳಾದ ಇಬ್ರಾಹಿಂ ಜಹರ್, ಮೊಹಮ್ಮದ್ ನೌಫಲ್ ಮತ್ತು ಮೊಮೆನ್ ಅಲಿವಾ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಅಲ್-ಶರೀಫ್ ಚಾನೆಲ್‌ ವರದಿಗಾರರಲ್ಲಿ ಅತ್ಯಂತ ಗುರುತಿಸಬಹುದಾದ ಮುಖಗಳಲ್ಲಿ ಒಬ್ಬರಾಗಿದ್ದರು, ನಿಯಮಿತ ದೈನಂದಿನ ವರದಿಗಳನ್ನು ಒದಗಿಸುತ್ತಿದ್ದರು ಎನ್ನಲಾಗಿದೆ.

"ಸ್ವಲ್ಪ ಸಮಯದ ಹಿಂದೆ, ಗಾಜಾ ನಗರದಲ್ಲಿ, ಅಲ್ ಜಜೀರಾ ನೆಟ್‌ವರ್ಕ್‌ನ ಪತ್ರಕರ್ತನಂತೆ ನಟಿಸುತ್ತಿದ್ದ ಭಯೋತ್ಪಾದಕ ಅನಾಸ್ ಅಲ್-ಷರೀಫ್‌ನನ್ನು ಐಡಿಎಫ್ ಹೊಡೆದುರುಳಿಸಿತು. ಆಲ್ ಶರೀಫ್ ಹಮಾಸ್ ಭಯೋತ್ಪಾದಕ ಸಂಘಟನೆಯಲ್ಲಿ ಒಂದು ವಿಭಾಗದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ್ದನು. ಇಸ್ರೇಲಿ ನಾಗರಿಕರು ಮತ್ತು ಐಡಿಎಫ್​ ಪಡೆಗಳ ವಿರುದ್ಧ ರಾಕೆಟ್ ದಾಳಿಗಳನ್ನು ಮುನ್ನಡೆಸುವ ಜವಾಬ್ದಾರಿ ಹೊಂದಿದ್ದನು" ಇಸ್ರೇಲ್ ಸೇನೆ ಹೇಳಿದೆ.

ಕಳೆದ 22 ತಿಂಗಳ ಯುದ್ಧದಲ್ಲಿ ಗಾಜಾದಲ್ಲಿ ಪತ್ರಕರ್ತರನ್ನು ಗುರಿಯಾಗಿಸಿಕೊಂಡು ನಡೆದ ಇತ್ತೀಚಿನ ದಾಳಿ ಇದಾಗಿದ್ದು, ಸಂಘರ್ಷದ ಅವಧಿಯಲ್ಲಿ ಸುಮಾರು 200 ಮಾಧ್ಯಮ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ಕಾವಲುಗಾರರು ತಿಳಿಸಿದ್ದಾರೆ. (ಏಜೆನ್ಸೀಸ್)