Rannvijay Singha: ಎಂಟಿವಿ ರೋಡೀಸ್ ಮೂಲಕ ಫೇಮಸ್ ಆಗಿರುವ ನಟ, ನಿರೂಪಕ ರಣ್‌ವಿಜಯ್ ಸಿಂಘಾ ಫಿಟ್‌ನೆಸ್ ಮತ್ತು ಆರೋಗ್ಯದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 40ರ ವಯಸ್ಸಿನಲ್ಲಿ ಫಿಟ್‌ನೆಸ್ ಅಂದ್ರೆ ದೇಹವನ್ನು ಆಕರ್ಷಕವಾಗಿ ಇಟ್ಟುಕೊಳ್ಳೋದು ಮಾತ್ರವಲ್ಲ, ಮಕ್ಕಳ ಜತೆ ಆಟವಾಡಲು, ಅವರೊಂದಿಗೆ ಸಮಯ ಕಳೆಯಲು ಸದಾ ಚುರುಕಾಗಿರೋದು ಕೂಡ ಮುಖ್ಯ ಅಂತ ಹೇಳಿದ್ದಾರೆ.
ಹೆಚ್.ಟಿ. ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಣ್‌ವಿಜಯ್ ಸಿಂಘಾ, ಸೋಷಿಯಲ್ ಮೀಡಿಯಾದಲ್ಲಿ ಕಾಣಿಸುವ ಫಿಟ್‌ನೆಸ್ ಟ್ರೆಂಡ್‌ಗಳನ್ನು ನೋಡಿ ಕುರುಡಾಗಿ ಫಾಲೋ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ. ಮೊದಲು ನಮ್ಮ ದೇಹದ ಸಾಮರ್ಥ್ಯ ಎಷ್ಟಿದೆ ಅನ್ನೋದನ್ನು ಅರ್ಥಮಾಡಿಕೊಂಡು, ಅದಕ್ಕೆ ತಕ್ಕಂತೆ ವ್ಯಾಯಾಮ ಶುರು ಮಾಡಬೇಕು ಎಂದಿದ್ದಾರೆ.
ರಣ್‌ವಿಜಯ್ ತಮ್ಮ ಮಕ್ಕಳ ವೇಳಾಪಟ್ಟಿಗೆ ತಕ್ಕಂತೆ ದೈಹಿಕ ಚಟುವಟಿಕೆಗಳಿಗೆ ಸಮಯ ಕೊಡುತ್ತಾರೆ. ಪ್ಯಾಡೆಲ್, ಬಾಸ್ಕೆಟ್‌ಬಾಲ್, ಫ್ರಿಸ್ಬೀ ಆಟಗಳ ಜತೆಗೆ ಸೈಕ್ಲಿಂಗ್ ಮತ್ತು ವಾಕಿಂಗ್ ಕೂಡ ಮಾಡುತ್ತಾರೆ. ಸಮಯ ಸಿಕ್ಕಾಗ ಜಿಮ್‌ಗೂ ಹೋಗುತ್ತಾರೆ. ವಯಸ್ಸು ಹೆಚ್ಚಾದಂತೆ ಆಹಾರ ಪದ್ಧತಿ, ಸ್ಟ್ರೆಚಿಂಗ್ ಮತ್ತು ದೇಹವನ್ನು ಚುರುಕಾಗಿ ಇಟ್ಟುಕೊಳ್ಳುವುದರ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಫಿಟ್‌ನೆಸ್ ಬಗ್ಗೆ ಸಾಕಷ್ಟು ಸಲಹೆಗಳು ಸಿಗುತ್ತವೆ. ಆದರೆ ಎಲ್ಲರ ದೇಹ ಒಂದೇ ರೀತಿ ಇರಲ್ಲ; ಹಾಗಾಗಿ ಎಲ್ಲರಿಗೂ ಒಂದೇ ವ್ಯಾಯಾಮ ಅಥವಾ ಆಹಾರ ಪದ್ಧತಿ ಹೊಂದಿಕೆಯಾಗಲ್ಲ ಎಂದು ರಣ್‌ವಿಜಯ್ ಹೇಳಿದ್ದಾರೆ. ಟ್ರೆಂಡ್‌ಗಳನ್ನು ಫಾಲೋ ಮಾಡುವುದಕ್ಕಿಂತ, ನಮ್ಮ ದೇಹ ಈಗ ಯಾವ ಸ್ಥಿತಿಯಲ್ಲಿದೆ ಅನ್ನೋದನ್ನು ಮೊದಲು ಅರ್ಥಮಾಡಿಕೊಳ್ಳಬೇಕು ಅನ್ನೋದು ಅವರ ಸಲಹೆ. ಫಿಟ್‌ನೆಸ್ ಶುರು ಮಾಡುವವರು ತಮ್ಮ ದೇಹದ ಸಾಮರ್ಥ್ಯಕ್ಕೆ ತಕ್ಕಂತೆ ಸರಳ ವ್ಯಾಯಾಮಗಳಿಂದ ಆರಂಭಿಸಬೇಕು ಎಂದಿದ್ದಾರೆ.Rannvijay Singha
ಆರೋಗ್ಯವಾಗಿರಲು ವ್ಯಾಯಾಮ ಮಾಡಿದರೆ ಮಾತ್ರ ಸಾಲದು; ಸರಿಯಾದ ಆಹಾರ, ಸಾಕಷ್ಟು ನೀರು ಮತ್ತು ಒಳ್ಳೆಯ ನಿದ್ರೆಯೂ ಮುಖ್ಯ ಎಂದು ರಣ್‌ವಿಜಯ್ ಅಭಿಪ್ರಾಯಪಟ್ಟಿದ್ದಾರೆ. ಪ್ರತಿದಿನ ಎಂಟರಿಂದ ಒಂಬತ್ತು ಗಂಟೆಗಳ ಕಾಲ ನಿದ್ರೆ ಮಾಡುವುದಕ್ಕೆ ಆದ್ಯತೆ ನೀಡುತ್ತೇನೆ ಎಂದಿದ್ದಾರೆ. ‘ರೋಡೀಸ್’ನಿಂದ ಓಟಿಟಿ ಕಾರ್ಯಕ್ರಮಗಳವರೆಗೆ ತಮ್ಮ ವೃತ್ತಿಜೀವನವನ್ನು ಮುಂದುವರಿಸಿರುವ ಅವರು, ಕಾಲಕ್ಕೆ ತಕ್ಕಂತೆ ಬದಲಾಗುವುದು ಮತ್ತು ಹೊಸ ವಿಚಾರಗಳನ್ನು ಕಲಿಯುತ್ತಿರೋದು ಯಶಸ್ಸಿಗೆ ಮುಖ್ಯ ಎಂದು ಹೇಳಿದ್ದಾರೆ.