ಗಂಗೊಳ್ಳಿ: ಎರಡು ತಿಂಗಳ ನಿಷೇಧದ ಬಳಿಕ ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಂಡಿದ್ದು, ಜಿಲ್ಲೆಯ ಪ್ರಮುಖ ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕೆ ಚಟುವಟಿಕೆ ಬಿರುಸುಗೊಂಡಿದೆ. ಮಳೆಗಾಲದ ರಜೆ ಬಳಿಕ ಮತ್ತೆ ಮೀನುಗಾರಿಕಾ ಚಟುವಟಿಕೆಗಳು ಆರಂಭಗೊಂಡಿದ್ದು, ವಿಶ್ರಾಂತಿಯಲ್ಲಿದ್ದ ಬೋಟುಗಳನ್ನು ಕಡಲಿಗೆ ಇಳಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಮೀನುಗಾರಿಕೆ ಅಗತ್ಯವಿರುವ ಬಲೆ ಮತ್ತಿತರ ಸಲಕರಣೆಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಆಳಸಮುದ್ರ ಮೀನುಗಾರರು ಮತ್ತೆ ಕಡಲಿಗಿಳಿದಿದ್ದು, ವಾರದಿಂದ ದೋಣಿ ಮತ್ತು ಕೆಲ ಬೋಟುಗಳಿಗೆ ಉತ್ತಮ ಮೀನುಗಾರಿಕೆ ನಡೆದಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಹಳೇ ಜೆಟ್ಟಿ ಪ್ರದೇಶದಲ್ಲಿ ಬೋಟು ನಿಲ್ಲಲು ವ್ಯವಸ್ಥೆ ಮಾಡಲಾಗಿದೆ. ಸುಮಾರು 400 ಮೀಟರ್ ಉದ್ದದ ಜೆಟ್ಟಿ ಪ್ರದೇಶದಲ್ಲಿ 150 ಮೀಟರ್ ಜೆಟ್ಟಿ ಪ್ರದೇಶ ಕುಸಿದಿರುವುದರಿಂದ 12 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಕಳೆದ ಸಾಲಿನ ಮೀನುಗಾರಿಕಾ ಋತು ನಿರಾಸೆಯಲ್ಲಿ ಅಂತ್ಯಗೊಂಡಿರುವುದು ಮತ್ತು ಮಳೆಗಾಲದಲ್ಲಿ ನಡೆಯುವ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಕೆಲವೇ ದಿನಗಳು ನಡೆದಿರುವುದು ಮೀನುಗಾರರಲ್ಲಿ ನಿರಾಸೆ ಮೂಡಿಸಿದೆ. ಈ ಎಲ್ಲ ಸಮಸ್ಯೆಗಳನ್ನು ಹೊತ್ತು ಪ್ರಸಕ್ತ ಸಾಲಿನಲ್ಲಿ ಹೊಸ ಭರವಸೆಯೊಂದಿಗೆ ಮೀನುಗಾರರು ಕಡಲಿಗಿಳಿದಿದ್ದಾರೆ. ಮೀನುಗಾರಿಕೆ ಉತ್ತೇಜನ ನೀಡುವ ಮತ್ತು ಮೀನುಗಾರರಿಗೆ ಬೆಂಬಲ ನೀಡುವ ಯೋಜನೆ ಸರ್ಕಾರಗಳ ಮೂಲಕ ನಡೆಯಬೇಕಿದೆ ಎನ್ನುವುದು ಸ್ಥಳೀಯ ಮೀನುಗಾರರ ಒಕ್ಕೊಲರ ಆಗ್ರಹ. ಹೊಸ ನಿರೀಕ್ಷೆ: ಗಂಗೊಳ್ಳಿ ಅಳಿವೆಯಲ್ಲಿ 102 ಕೋಟಿ ರೂ. ವೆಚ್ಚದ ಬ್ರೇಕ್ ವಾಟರ್ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಹೂಳೆತ್ತುವ ಕಾಮಗಾರಿ ಈವರೆಗೆ ನಡೆಯದಿರುವುದರಿಂದ ಅಳಿವೆಯಲ್ಲಿ ಹೂಳು ತುಂಬಿಕೊಂಡಿದ್ದು, ದೋಣಿ ಹಾಗೂ ಬೋಟುಗಳ ಸಂಚಾರಕ್ಕೆ ತೊಡಕಾಗುವ ಸಾಧ್ಯತೆ ಹೆಚ್ಚಾಗಿದೆ. ಹವಾಮಾನ ವೈಪರೀತ್ಯ, ಮತ್ಸ್ಯ ಕ್ಷಾಮದಿಂದ ಕಳೆದ ಸಾಲಿನಲ್ಲಿ ಕಂಗೆಟ್ಟು ಹೋಗಿರುವ ಮೀನುಗಾರರು ಈ ಬಾರಿ ಹೊಸ ನಿರೀಕ್ಷೆಯೊಂದಿಗೆ ಕಡಲಿಗೆ ಇಳಿಯಲು ಉತ್ಸಾಹ ತೋರುತ್ತಿರುವುದು ಕಂಡುಬಂದಿದೆ. ಅಳಿವೆ ಭೀತಿ: ಗಂಗೊಳ್ಳಿ ಬಂದರಿನಲ್ಲಿ ಸುಮಾರು 100ಕ್ಕೂ ಮಿಕ್ಕಿ ಫಿಶಿಂಗ್ ಬೋಟ್ ಸೇರಿದಂತೆ 400ಕ್ಕೂ ಅಧಿಕ ಬೋಟುಗಳು ಹಾಗೂ 25ಕ್ಕೂ ಮಿಕ್ಕಿ ಆಳ ಸಮುದ್ರ ಬೋಟುಗಳು ಕಾರ್ಯಾಚರಿಸುತ್ತಿವೆ. ಬ್ರೇಕ್ ವಾಟರ್‌ನಿಂದ ಅಳಿವೆಯಲ್ಲಿನ ಭೀತಿ ಕೊಂಚ ಕಡಿಮೆಯಾಗಿರುವುದರಿಂದ ಮೀನುಗಾರರು ನೆಮ್ಮದಿಯಲ್ಲಿದ್ದಾರೆ. ಹೂಳಿನ ಗೋಳು: ಗಂಗೊಳ್ಳಿ ಕಿರುಬಂದರಿನಲ್ಲಿ ಹೂಳಿನ ಸಮಸ್ಯೆ ಎದುರಾಗಿದೆ. ಬಂದರಿನ 405 ಮೀಟರ್ ಜೆಟ್ಟಿ, ಹಳೆಯ ಜೆಟ್ಟಿ, ಗಂಗೊಳ್ಳಿ-ಕೋಡಿ ನಡುವಿನ ಅಳಿವೆ, ಮ್ಯಾಂಗನೀಸ್ ವಾರ್ಫ್, ಬ್ರೇಕ್‌ವಾಟರ್ ಇಕ್ಕೆಲಗಳಲ್ಲಿ ಹೂಳು ಆವರಿಸಿದ್ದು, ಬೋಟುಗಳು ಜೆಟ್ಟಿಯಲ್ಲಿ ನಿಲ್ಲಲು ಹಾಗೂ ಅಳಿವೆ ಮೂಲಕ ಸಾಗಲು ತೊಂದರೆಯಾಗುವ ಸಾಧ್ಯತೆ ಇದೆ. ಹೀಗಾಗಿ ಜೆಟ್ಟಿ ಹಾಗೂ ಅಳಿವೆ ಪ್ರದೇಶಗಳಲ್ಲಿ ಹೂಳೆತ್ತಲು ಸರ್ಕಾರ ಕ್ರಮ ವಹಿಸಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.
ಕಳೆದ ಸಾಲಿನಲ್ಲಿ ಮೀನುಗಾರಿಕೆ ನಾಡದೋಣಿ ಮೀನುಗಾರರಿಗೆ ಪೂರಕವಾಗಿರಲಿಲ್ಲ. ಮತ್ಸ್ಯಕ್ಷಾಮ ಮತ್ತಿತರ ಕಾರಣಗಳಿಂದ ಋತುವಿನ ಅಂತ್ಯದ ಕೆಲವು ತಿಂಗಳು ಮೀನುಗಾರಿಕೆ ನಡೆಯಲಿಲ್ಲ. ಲೈಟ್‌ಫಿಶಿಂಗ್, ಸೀಮೆಎಣ್ಣೆ ಅಲಭ್ಯತೆಯಿಂದ ನಾಡದೋಣಿ ಮೀನುಗಾರರಿಗೆ ತೊಂದರೆಯಾಗಿದೆ. ಸರ್ಕಾರದ ಮುಂದೆ ನಮ್ಮೆಲ್ಲ ಸಮಸ್ಯೆಗಳನ್ನು ಮುಂದಿರಿಸಿದ್ದೇವೆ. ಗಂಗೊಳ್ಳಿ ಬಂದರಿನಲ್ಲಿ ಮೂಲ ಸೌಲಭ್ಯ ಒದಗಿಸಬೇಕು. | ಯಶವಂತ ಖಾರ್ವಿ, ಅಧ್ಯಕ್ಷರು, ನಾಡದೋಣಿ ಮೀನುಗಾರರ ಸಂಘ, ಗಂಗೊಳ್ಳಿ ವಲಯ. ಬಂದರಿನಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಕುಸಿದು ಬಿದ್ದಿರುವ ಜೆಟ್ಟಿ ಪುನರ್ ನಿರ್ಮಾಣ ಕಾರ್ಯ ಸಾಗುತ್ತಿದ್ದು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು. ಬಂದರಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಯೋಜನೆ ರೂಪಿಸಬೇಕು. ಮೀನುಗಾರರ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು. | ಮಂಜುನಾಥ ಖಾರ್ವಿ, ಸ್ಥಳೀಯ ಮೀನುಗಾರ, ಗಂಗೊಳ್ಳಿ.