ಬಿಡದಿ : ನಿರುದ್ಯೋಗಿ ಯುವಕರನ್ನು ಮೀನುಗಾರಿಕೆಯತ್ತ ಆಕರ್ಷಿಸಿ ಉತ್ತೇಜನ ನೀಡಲಾಗುತ್ತಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.
ಬಿಡದಿ ಹೋಬಳಿ ನೆಲ್ಲಿಗುಡ್ಡೆ ರಸ್ತೆಯಲ್ಲಿರುವ ಬಯೋಪ್ಲಾಕ್ ಫಾರ್ಮ್‌ನಲ್ಲಿ ಶನಿವಾರ ಮೀನು ಕೃಷಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮೀನುಗಾರಿಕೆ ಕ್ಷೇತ್ರದಲ್ಲಿ ಹೀರಾಲಾಲ್ ಚೌಧರಿ ಅವರ ಸಾಧನೆಯ ಸವಿನೆನಪಿನಲ್ಲಿ ಪ್ರತಿವರ್ಷ ಜು.10ರಂದು ದಿನಾಚರಣೆ ಆಚರಿಸ ಲಾಗುತ್ತಿದೆ. ಕರಾವಳಿ ಮತ್ತು ಒಳನಾಡು ಮೀನು ಗಾರಿಕೆ ವಿಧಾನಗಳು ಬೇರೆಯಾಗಿದ್ದು.
ಅವುಗಳಿಗೆ ವಲಯ ವಾರು ಅನುಕೂಲವಾಗುವಂತೆ ಇಲಾಖೆ ಅಧ್ಯಯನ ಮಾಡುತ್ತಿದೆ. ಯೋಜನೆ ಗಳಿಗೆ ಪೂರಕವಾಗಿ ಅಧಿಕಾರಿಗಳ ಜತೆ ಸಾಧಕ ಬಾಧಕಗಳ ಚರ್ಚೆ ಮಾಡಿ ಮೀನುಗಾರಿಕೆ ಕೃಷಿ ಅಭಿವೃದ್ಧಿಪಡಿಸುವುದಾಗಿ ಹೇಳಿದರು.
ಕೃಷಿ, ಶಿಕ್ಷಣ ಕ್ಷೇತ್ರಗಳಲ್ಲಿ ಸ್ಪಷ್ಟ ನೀತಿಗಳಿಲ್ಲ. ಹಾಗಾಗಿ ಸರ್ಕಾರ ಸಹಕಾರ, ಆದ್ಯತೆ ನೀಡಿದಾಗ ಆ ಕ್ಷೇತ್ರಗಳು ಬೆಳೆಯಲು ಸಾಧ್ಯವಿದೆ. ಸಂಸದರು, ಶಾಸಕರು ಮತ್ತು ಮೀನು ಕೃಷಿಕರ ಸಲಹೆಗಳನ್ನು ಇಲಾಖೆ ಸ್ವೀಕರಿಸಿದೆ. ಅದರ ಅನುಷ್ಠಾನಕ್ಕೆ ಸರ್ಕಾರದ ಜತೆ ಚರ್ಚೆ ನಡೆಸುತ್ತೇನೆ ಎಂದರು.
ಮೀನುಗಾರಿಕೆಯಿಂದ ಆಶಾದಾಯಕ ಬದುಕು :
ರೇಷ್ಮೆ, ತೋಟಗಾರಿಕೆ, ಕೃಷಿ, ಮೀನುಗಾರಿಕೆ ಹಾಗೂ ಪಶು ಸಂಗೋಪನೆಗೆ ಪ್ರತ್ಯೇಕ ಸಚಿವರಿದ್ದು, ಕೃಷಿಕನಿಗೆ ಒಂದೇ ಸೂರಿನಡಿ ಮಾಹಿತಿ ಮತ್ತು ಯೋಜನೆ ಲಾಭಗಳು ಸಿಗದೆ ಹರಿದು ಹಂಚಿ ಹೋಗಿವೆ ಎಂದು ಬೇಸರಿಸಿದರು. ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಏಕೈಕ ಕ್ಷೇತ್ರವಾಗಿದೆ. ಮೀನುಗಾರಿಕೆ ಕೃಷಿಗೆ ಕಡಲ ತೀರದಲ್ಲಿ ಅಷ್ಟೇ ಅಲ್ಲ, ಒಳನಾಡಿನಲ್ಲೂ ಹೆಚ್ಚಿನ ಅವಕಾಶಗಳಿವೆ. ಮೀನು ಆಹಾರಕ್ಕೆ ಬೇಡಿಕೆ ಹೆಚ್ಚಿದ್ದು, ಯುವಕರು ಈ ಕ್ಷೇತ್ರವನ್ನು ಉದ್ಯಮವಾಗಿ ಆಯ್ಕೆ ಮಾಡಿಕೊಂಡು ಆಸಕ್ತಿ ಮತ್ತು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದರೆ ಆಶಾದಾಯಕ ಜೀವನ ನಡೆಸಲು ಸಾಧ್ಯವಿದೆ ಎಂದು ಸಂಸದ ಡಿ.ಕೆ. ಸುರೇಶ್ ಅಭಿಪ್ರಾಯಪಟ್ಟರು.
ಶಾಸಕ ಎ.ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ರೈತರು ರೇಷ್ಮೆ, ಹೈನುಗಾರಿಕೆಯಲ್ಲಿ ತೊಡಗಿದ್ದು, ನಿರ್ವಹಣೆ ಸೂಕ್ಷ್ಮವಾಗಿದೆ. ಹಾಗಾಗಿ ಯುವಕರು ಕೋಳಿ, ಮೇಕೆ ಮತ್ತು ಮೀನು ಸಾಕಾಣಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ನಷ್ಟವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಸಚಿವರು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಮೀನುಗಾರಿಕೆಗೆ ಹೆಚ್ಚಿನ ಮಾರುಕಟ್ಟೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಸಹಾಯವಾಣಿಗೆ ಚಾಲನೆ : ಇಲಾಖೆ ಮಾಹಿತಿ ನೀಡುವ ಸಹಾಯವಾಣಿ (8277200300) ಸಂಖ್ಯೆಗೆ ಸಚಿವರು ಚಾಲನೆ ನೀಡಿದರು. ಇಲಾಖೆಯ ಭಿತ್ತಿಪತ್ರ, ಮತ್ಸ್ಯಸಂಪದ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಮೀನುಗಾರಿಕೆ ಇಲಾಖೆ ಹಿರಿಯ ಅಧಿಕಾರಿ ಗುರುರಾಜ್ ಸಿಂಘಿ, ಮೀನು ಕೃಷಿಕರಾದ ರೇಖಾ ರಮೇಶ್, ಮಂಗಳಮ್ಮ, ಸಾಬಾಜ್, ರಾಜೀವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಳೆಗಾಲದ ಮೀನುಗಾರಿಕೆ, ಬೇಸಿಗೆ ಕಾಲದ ಮೀನುಗಾರಿಕೆ ಬಗ್ಗೆ ಮೀನು ಕೃಷಿಕರ ಜತೆ ಸಂವಾದ ನಡೆಸಿ, ಸಾಧಕ ಬಾಧಕಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ. ಮೀನು ಕೃಷಿಕರ ದಿನವಾದ ಶನಿವಾರ ರಾಮನಗರದಲ್ಲಿ ಮೀನುಗಾರಿಕಾ ಕೃಷಿಕರಿಗೆ ಮಾಹಿತಿ ಪಡೆಯಲು ಸಹಾಯವಾಣಿ ಸಹಕಾರಿಯಾಗಲಿದೆ.
ಎಸ್.ಅಂಗಾರ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ
ವಿದ್ಯುತ್‌ಗೆ ಸಬ್ಸಿಡಿ ನೀಡಿ : ಮೀನು ಕೃಷಿಕ ಅರಣಾಚಲಂ ಮಾತನಾಡಿ, ಆಹಾರದ ವೆಚ್ಚ ಕಡಿಮೆ ಆಗಬೇಕು. ಮೀನು ಕೃಷಿಗೆ ಬಳಸುವ ವಿದ್ಯುತ್‌ಗೆ ಸಬ್ಸಿಡಿ ನೀಡಿ, ಬಳಕೆ ಶುಲ್ಕ ಕಡಿಮೆ ಮಾಡಬೇಕು. ಬಯೋಪ್ಲಾಕ್ ತರಬೇತಿ ಅಭಿವೃದ್ಧಿಗಾಗಿ ಸೋಲಾರ್‌ಗೆ ಶೇ.50 ಸಬ್ಸಿಡಿ ನೀಡಬೇಕು. ಈ ಬಗ್ಗೆ ಸಚಿವರು ಕ್ರಮ ವಹಿಸಿದರೆ ಮೀನು ಕೃಷಿಕರಿಗೆ ಹೆಚ್ಚು ಆದಾಯ ಬರಲಿದೆ. ರೈತರ ಕೃಷಿ ಹೊಂಡಗಳಲ್ಲಿ ಬಯೋಪ್ಲಾಕ್ ಮಾಡಲು ಎಲ್ಲರೂ ಮುಂದಾಗಿ ಉಚಿತವಾಗಿ ತರಬೇತಿ ನೀಡುವ ಬಗ್ಗೆ ಚಿಂತಿಸಿದ್ದೇನೆ ಎಂದರು.