ಸಾಗರ: ಮಗುವಿಗೆ ಶಿಕ್ಷಣ ಹಾಗೂ ಅಗತ್ಯ ಸೌಕರ್ಯ ಒದಗಿಸಲು ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಆವಿನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿವೇಕ ಯೋಜನೆಯಡಿ ನಿರ್ಮಿಸಿದ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರತಿಭಾವಂತ ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ಅವಶ್ಯ. ಮಕ್ಕಳು ಉತ್ತಮ ಅಂಕದ ಜತೆಗೆ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಶೈಕ್ಷಣಿಕ ಅಭಿವೃದ್ಧಿಗೆ ಪಾಲಕರು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸಹಕಾರ ನೀಡಬೇಕು ಎಂದು ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ್ ಮಾತನಾಡಿ, ಆವಿನಹಳ್ಳಿ ಶಾಲೆಯನ್ನು ಮಾದರಿಯಾಗಿಸುವ ಪ್ರಯತ್ನ ನಡೆಯುತ್ತಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ ಬಂದಿದೆ. ಈ ಬಾರಿಯೂ ಶೇ.100 ಫಲಿತಾಂಶ ಬರಲು ಈಗಿನಿಂದಲೇ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಆವಿನಹಳ್ಳಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ರಾಜು ಪಟೇಲ್, ಸಫಿಯಾ, ಕುಮಾರ್, ಸತೀಶ್, ಕೋಳೂರು ಗ್ರಾಪಂ ಅಧ್ಯಕ್ಷ ನವೀನ್ ಗೌಡ, ಆಪ್ಸ್‌ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಗೌಡ, ಇ.ಪರಶುರಾಮಪ್ಪ, ಸಿದ್ದವೀರಪ್ಪ ಗೌಡ, ನಂಜುಂಡಪ್ಪ, ವರ್ಷಾ, ನಾಗೇಶ್ ಸುಬ್ರಹ್ಮಣ್ಯ ಇತರರಿದ್ದರು.