ನ್ಯೂಸ್

ಮೊದಲ ದಿನವೇ 17 ನಿರ್ಣಯಗಳಿಗೆ ಬೈಡೆನ್​ ಸಹಿ

ಜನವರಿ 20ರಂದು ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡೆನ್ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ‘ಸಮಯ ವ್ಯರ್ಥ ಮಾಡುವುದಿಲ್ಲ. ಈಗಿನಿಂದಲೇ ಕೆಲಸ ಆರಂಭ’ ಎಂದು ಟ್ವೀಟ್ ಮಾಡಿದ್ದರು. ಅದರಂತೆ ಪ್ರಮಾಣವಚನದ ಪ್ರಕ್ರಿಯೆಗಳು ಮುಗಿಯುತ್ತಿದ್ದಂತೆ ವರ್ಕ್ ಮೋಡ್​ಗೆ ಬಂದ ಬೈಡೆನ್ 17 ಆದೇಶಗಳಿಗೆ ಸಹಿ ಹಾಕಿದರು. ಅವುಗಳ ಪೈಕಿ ಕೆಲವು ಔಪಚಾರಿಕ ಕ್ರಮಗಳಾದರೆ, ಏಳು ಪ್ರಮುಖವಾದವು.

ಮಾಸ್ಕ್ ಕಡ್ಡಾಯ

ಮಾಸ್ಕನ್ನು ‘ಫೆಡರಲ್ ಪ್ರಾಪರ್ಟಿ’ ಎಂದು ಘೋಷಿಸಲಾಗಿದೆ. ಅಂದರೆ, ಮಹಾಮಾರಿ ಅವಧಿಯಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರಿ ಕಚೇರಿಯಲ್ಲಿದ್ದರೆ, ಆರೋಗ್ಯ ಕಾರ್ಯಕರ್ತರಾಗಿದ್ದರೆ ವೈಯಕ್ತಿಕ ಅಂತರ ಕಾಪಾಡುವುದೂ ಕಡ್ಡಾಯ.

ಪರಿಣಾಮ: ಅಮೆರಿಕದಲ್ಲಿ ಕರೊನಾ ಹಾವಳಿ ಮುಂದುವರಿದಿದೆ. ಹೀಗಿರುವಾಗ ಸೋಂಕಿನ ಪ್ರಸರಣ ವೇಗ ತಡೆಯಲು ಮಾಸ್ಕ್ ಧಾರಣೆ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅಗತ್ಯ. ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಸ್ಕನ್ನು ಕಡ್ಡಾಯಗೊಳಿಸಿರಲಿಲ್ಲ. ಅಷ್ಟೇ ಅಲ್ಲ, ಒಂದು ಸಮಾರಂಭದಲ್ಲಿ ಮಾಸ್ಕನ್ನು ತೆಗೆದು ಬಿಸಾಡಿದ್ದರು. ಈಗ ಕಠಿಣ ನಿಯಮ ಜಾರಿಗೆ ಬಂದಿರುವುದರಿಂದ ಕರೊನಾ ವಿರುದ್ಧ ಸಮರಕ್ಕೆ ಸಹಾಯವಾಗಬಹುದು.

ನಿರ್ಬಂಧ ತೆರವು

ಇರಾಕ್, ಇರಾನ್, ಲಿಬಿಯಾ, ಸೋಮಾಲಿಯಾ, ಸುಡಾನ್, ಸಿರಿಯಾ ಮತ್ತು ಯೆಮೆನ್ ಮೇಲೆ ವಿಧಿಸಲಾಗಿದ್ದ ಪ್ರಯಾಣ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. 2017ರಲ್ಲಿ ಟ್ರಂಪ್ ಅಧಿಕಾರ ಸ್ವೀಕರಿಸುತ್ತಿದ್ದಂತೆ ಮೊದಲ ವಾರದಲ್ಲೇ ಈ ಏಳು ರಾಷ್ಟ್ರದವರು ಅಮೆರಿಕ ಪ್ರವೇಶಿಸುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಇದು ಭಾರಿ ವಿವಾದಕ್ಕೂ ಕಾರಣವಾಗಿ, ಪ್ರಕರಣ ಸುಪ್ರೀಂ ಕೋರ್ಟ್ ತಲುಪಿತ್ತು.

ಏನಾಗಿತ್ತು?: ಮುಸ್ಲಿಂ ಬಾಹುಳ್ಯದ 7 ರಾಷ್ಟ್ರಗಳ ಜನರು ಅಮೆರಿಕ ಪ್ರವೇಶಿಸುವುದಕ್ಕೆ 90 ದಿನಗಳವರೆಗೆ ನಿರ್ಬಂಧ ಹೇರುವ ಕಾರ್ಯಕಾರಿ ಆದೇಶವನ್ನು ಟ್ರಂಪ್ 2017 ಜ. 27ರಂದು ಜಾರಿಮಾಡಿದ್ದರು. ಎಲ್ಲ ನಿರಾಶ್ರಿತರನ್ನು 120 ದಿನಗಳವರೆಗೆ ಪ್ರತಿಬಂಧಿಸುವ ಹಾಗೂ ಸಿರಿಯಾದ ನಿರಾಶ್ರಿತರ ಪ್ರವೇಶವನ್ನು ಅನಿರ್ದಿಷ್ಟಾವಧಿವರೆಗೆ ನಿಷೇಧಿಸುವ ಅಂಶವೂ ಇದರಲ್ಲಿ ಅಂತರ್ಗತವಾಗಿತ್ತು. ಈ ಆದೇಶ ಹೊರಬಿದ್ದಿದ್ದೇ ತಡ, ಒಂದಿಡೀ ವಲಸೆಗಾರಿಕೆ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿತ್ತು. ಆದೇಶದಲ್ಲಿ ಗುರಿಯಾಗಿಸಲಾಗಿದ್ದ ದೇಶಗಳು, ಪಾಶ್ಚಾತ್ಯ ಮಿತ್ರರಾಷ್ಟ್ರಗಳು ಮಾತ್ರವಲ್ಲದೆ ಅಮೆರಿಕದ ಕೆಲವೊಂದು ಅಗ್ರಗಣ್ಯ ಕಂಪನಿಗಳು ಅದರಲ್ಲೂ ವಿಶೇಷವಾಗಿ ತಂತ್ರಜ್ಞಾನ ಸಂಸ್ಥೆಗಳು ಈ ಆದೇಶವನ್ನು ಕಟುವಾಗಿ ಟೀಕಿಸಿದ್ದವು.

ಪರಿಣಾಮ: ಅಮೆರಿಕ ವಿರುದ್ಧ ಇಸ್ಲಾಮಿಕ್ ರಾಷ್ಟ್ರಗಳ ಆಕ್ರೋಶ ತಗ್ಗಲಿದೆ.

ಡಬ್ಲ್ಯುಎಚ್​ಒಗೆ ಮರು ಸೇರ್ಪಡೆ

ಅಮೆರಿಕ ಮತ್ತೆ ವಿಶ್ವ ಆರೋಗ್ಯ ಸಂಸ್ಥೆ ಸದಸ್ಯರಾಷ್ಟ್ರವಾಗಲಿದೆ. ಕರೊನಾ ನಿರ್ವಹಣೆಯಲ್ಲಿ ಡಬ್ಲ್ಯುಎಚ್​ಒ ವಿಫಲವಾಗಿದೆ ಮತ್ತು ಚೀನಾ ಹೇಳಿದಂತೆ ಅದು ಕೇಳುತ್ತಿದೆ ಎಂದು ಆರೋಪಿಸಿ ಡೊನಾಲ್ಡ್ ಟ್ರಂಪ್ ಡಬ್ಲ್ಯುಎಚ್​ಒಗೆ ಹಣಕಾಸಿನ ನೆರವನ್ನು ನಿಲ್ಲಿಸಿ, ಬಳಿಕ ಅಮೆರಿಕವನ್ನು ಆ ಸಂಘಟನೆಯಿಂದ ಹೊರ ತರುವುದಾಗಿ ಘೋಷಿಸಿದ್ದರು. ‘ಅಧ್ಯಕ್ಷನಾದರೆ ಅಮೆರಿಕ ಮತ್ತೆ ಡಬ್ಲ್ಯುಎಚ್​ಒ ಸದಸ್ಯರಾಷ್ಟ್ರವಾಗಲಿದೆ’ ಎಂದು ಜೋ ಬೈಡೆನ್ ಚುನಾವಣೆ ಪ್ರಚಾರದ ವೇಳೆಯೇ ಹೇಳಿದ್ದರು. ಅದರಂತೆ ನಿರ್ಣಯ ಕೈಗೊಂಡಿದ್ದಾರೆ. ಅಮೆರಿಕದ ಈ ನಿರ್ಧಾರವನ್ನು ಡಬ್ಲ್ಯುಎಚ್​ಒ ಸ್ವಾಗತಿಸಿದೆ.

ಪರಿಣಾಮ: ಕರೊನಾ ಲಸಿಕೆ ವಿತರಣೆ ಸೇರಿ ಜಾಗತಿಕ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಸಹಕಾರಿ ಆಗಲಿದೆ.

ಮರಳಿ ಪ್ಯಾರಿಸ್ ಒಪ್ಪಂದಕ್ಕೆ

ಭಾರತ, ಚೀನಾ, ರಷ್ಯಾ ಪರಿಸರ ಮಾಲಿನ್ಯವನ್ನು ತೀವ್ರವಾಗಿ ಹೆಚ್ಚಿಸುತ್ತಿವೆ ಎಂದು ಆರೋಪಿಸಿ ಡೊನಾಲ್ಡ್ ಟ್ರಂಪ್ 2019ರಲ್ಲಿ ಪ್ಯಾರಿಸ್ ಒಪ್ಪಂದದಿಂದ ಹೊರಬಂದರು. ಅವರ ಈ ನಿರ್ಧಾರ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಆದರೆ, ಬೈಡೆನ್ ಅಂಕಿತದೊಂದಿಗೆ ಅಮೆರಿಕ ಈಗ ಮತ್ತೆ ಪ್ಯಾರಿಸ್ ಒಪ್ಪಂದದ ಭಾಗವಾಗಿದೆ. ಅಧಿಕ ಮಟ್ಟದಲ್ಲಿ ಇಂಗಾಲವನ್ನು ಹೊರಸೂಸುವ ರಾಷ್ಟ್ರಗಳ ಯಾದಿಯಲ್ಲಿ ಅಮೆರಿಕ ಎರಡನೇ ಸ್ಥಾನದಲ್ಲಿದೆ.

ಪರಿಣಾಮ: ಪರಿಸರಕ್ಕೆ ಸಂಬಂಧಿಸಿದ ಜಾಗತಿಕ ಸವಾಲುಗಳನ್ನು ಈ ವೇದಿಕೆ ಮೂಲಕ ಪರಿಹರಿಸಿಕೊಳ್ಳಲು ನೆರವಾಗಲಿದೆ. ಇಂಧನ ವಲಯಕ್ಕೆ ಸಂಬಂಧಿಸಿದ ಭಾರತದ ಮಹತ್ವಾಕಾಂಕ್ಷೆಗಳು ಮತ್ತೆ ಗರಿಗೆದರಿವೆ.

ಏನಿದು ಪ್ಯಾರಿಸ್ ಒಪ್ಪಂದ?: ವಿಶ್ವಕ್ಕೆ ಒದಗಿರುವ ಗಮನಾರ್ಹ ಬೆದರಿಕೆಗಳಲ್ಲಿ ಒಂದೆನಿಸಿರುವ ಹವಾಮಾನ ಬದಲಾವಣೆ ತಡೆಯುವುದು ಮತ್ತು ವಿಶ್ವದ ಎಲ್ಲ ರಾಷ್ಟ್ರಗಳು ಈ ಧ್ಯೇಯದ ಸಾಧನೆಯಲ್ಲಿ ತೊಡಗಿಸಿಕೊಂಡು ಯಶಸ್ವಿಗೊಳಿಸಬೇಕು ಎಂಬುದು ಪ್ಯಾರಿಸ್ ಒಪ್ಪಂದದ ಮುಖ್ಯಾಂಶ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು 2020-25ರ ವೇಳೆಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಅಭಿವೃದ್ಧಿಗೆಂದು 10,000 ಕೋಟಿ ಡಾಲರ್​ಗಳನ್ನು ವಿನಿಯೋಗಿಸಬೇಕು.

ಗೋಡೆಗೆ ಬ್ರೇಕ್

ಮೆಕ್ಸಿಕೋದಿಂದ ಅಕ್ರಮವಾಗಿ ಅಮೆರಿಕಕ್ಕೆ ನುಸುಳುವವರನ್ನು ತಡೆಯಲು ಟ್ರಂಪ್ ಆಡಳಿತ ಗಡಿಯಲ್ಲಿ ಬೃಹತ್ ಗೋಡೆ ನಿರ್ವಿುಸಲು ಮುಂದಾಗಿತ್ತು. ಬೈಡೆನ್ ಇದಕ್ಕೆ ಬ್ರೇಕ್ ಹಾಕಿದ್ದಾರೆ.

ಪರಿಣಾಮ: ಅನವಶ್ಯಕ ಖರ್ಚಿಗೆ ಕಡಿವಾಣದ ಜತೆ ಗಡಿಯಲ್ಲಿ ಉದ್ವಿಗ್ನತೆ ಕಡಿಮೆಗೊಳಿಸಲು ಸಹಕಾರಿ.

ಏನಿದು ಗಡಿ ವಿವಾದ?: ಉತ್ತರ ಅಮೆರಿಕಕ್ಕೆ ತಾಗಿಕೊಂಡಿರುವ ಮೆಕ್ಸಿಕೋ 31 ಸಂಸ್ಥಾನಗಳು ಮತ್ತು ಮೆಕ್ಸಿಕೋ ನಗರವನ್ನು ಒಳಗೊಂಡ ಸಾಂವಿಧಾನಿಕ ಒಕ್ಕೂಟ ಗಣರಾಜ್ಯವಾಗಿದೆ. ಅಮೆರಿಕದೊಂದಿಗೆ ಈ ಪುಟ್ಟರಾಷ್ಟ್ರದ ಗಡಿವಿವಾದ ತುಂಬ ಹಳೆಯದು. 19ನೇ ಶತಮಾನದಲ್ಲಿ ನಡೆದ ಯುದ್ಧವಂತೂ ಕರಾಳ ಅಧ್ಯಾಯ. ಮೆಕ್ಸಿಕೋದೊಂದಿಗಿನ ಗಡಿ ಪೈಕಿ 1610 ಕಿಲೋಮೀಟರ್ ಪ್ರದೇಶಲ್ಲಿ ಗೋಡೆ ನಿರ್ವಿುಸುವುದಾಗಿ ಟ್ರಂಪ್ ಘೊಷಿಸಿ, ಈ ಗೋಡೆ ನಿರ್ವಣದ ವೆಚ್ಚವನ್ನು ಮೆಕ್ಸಿಕೋ ಭರಿಸುವಂತೆ ಮಾಡುವುದಾಗಿ ಹೇಳಿದ್ದರು. ಮೆಕ್ಸಿಕೋ ಮತ್ತು ಅಮೆರಿಕದ ಗಡಿ 3,100 ಕಿಮೀ ಉದ್ದದ್ದು. ಇದರಲ್ಲಿ ಈಗಾಗಲೇ 1,046 ಕಿ.ಮೀ. ಪ್ರದೇಶ ಬೇಲಿ, ಕಾಂಕ್ರೀಟ್ ಸ್ಲಾಬ್ ಮತ್ತಿತರ ರೀತಿಯಲ್ಲಿ ಆವರಿಸಿದೆ.

ವಿವಾದಿತ ಯೋಜನೆಗೆ ತಡೆ

ಕೆನಡಾ ಜತೆಗೆ ವಿವಾದಿತ ಕಿಸ್ಟೋನ್ ಗಿಔ ಪೈಪ್​ಲೈನ್ ಯೋಜನೆಗೆ ಬೈಡೆನ್ ತಡೆ ನೀಡಿದ್ದಾರೆ. 1900 ಕಿ.ಮೀ. ಉದ್ದದ ತೈಲ ಕೊಳವೆಮಾರ್ಗ ನಿರ್ವಿುಸುವ ಯೋಜನೆಗೆ 2019ರಲ್ಲಿ ಟ್ರಂಪ್ ಕೆನಡಾ ಜತೆ ಒಪ್ಪಂದ ಮಾಡಿಕೊಂಡಿದ್ದರು. ಪರಿಸರ ಸಂಘಟನೆಗಳ ವಿರೋಧಕ್ಕೆ ಮಣಿದು ಬರಾಕ್ ಒಬಾಮ ಆಡಳಿತ ಕೂಡ ಈ ಯೋಜನೆ ಮೇಲೆ ನಿರ್ಬಂಧ ಹೇರಿತ್ತು.

ಪರಿಣಾಮ: ಪರಿಸರದ ಮೇಲೆ ಆಗಲಿದ್ದ ವ್ಯತಿರಿಕ್ತ ಪರಿಣಾಮ ತಪ್ಪಲಿದೆ.

ನೆರವು ಘೋಷಣೆ

ಕರೊನಾದಿಂದ ಅಮೆರಿಕ ಭಾರಿ ಆರ್ಥಿಕ ನಷ್ಟ ಅನುಭವಿಸಿದೆ. ಹೀಗಾಗಿ, ಜನಸಾಮಾನ್ಯರಿಗೆ ನೆರವು ನೀಡುವ ಮತ್ತು ಶೈಕ್ಷಣಿಕ ಸಾಲದ ಇಎಂಐನ್ನು ಸೆಪ್ಟೆಂಬರ್​ವರೆಗೂ ಮುಂದೂಡುವ ನಿರ್ಧಾರಕ್ಕೆ ಬೈಡೆನ್ ಸಹಿ ಹಾಕಿದ್ದಾರೆ. ಅಮೆರಿಕದಲ್ಲಿ ಈವರೆಗೆ 2.50 ಕೋಟಿ ಜನರು ಸೋಂಕು ಪೀಡಿತರಾಗಿದ್ದು, ಮೃತರ ಸಂಖ್ಯೆ 4.15 ಲಕ್ಷದ ಗಡಿ ದಾಟಿದೆ.

ಪರಿಣಾಮ: ಉದ್ಯೋಗ ಕಳೆದುಕೊಂಡು ಅಥವಾ ಸಂಬಳ ಕಡಿತಗೊಂಡು ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಒಂದಿಷ್ಟು ಸಹಾಯವಾಗಲಿದೆ.