ನ್ಯೂಸ್

ಕೊರೊನಾ ವೈರಸ್​ ಸೋಂಕು: ಅಮೆರಿಕದಲ್ಲಿ ಮೊದಲ ಸಾವು ಖಾತರಿಪಡಿಸಿದ ವಾಷಿಂಗ್ಟನ್ ಸ್ಟೇಟ್

ಲಾಸ್ ಏಂಜಲೀಸ್​: ಜಗತ್ತಿನಾದ್ಯಂತ ಕಳವಳ, ಆತಂಕ ಸೃಷ್ಟಿಸಿರುವ ಚೀನಾದ ಕೊರೊನಾ ವೈರಾಣು COVID-19 ಸೋಂಕು ಅಮೆರಿಕದ ನೆಲದ ಮೇಲೂ ಕಾಲಿರಿಸಿದ್ದು, ಮೊದಲ ಸಾವಿನ ಪ್ರಕರಣ ದಾಖಲಾಗಿದೆ. ಅಮೆರಿಕದ ವಾಷಿಂಗ್ಟನ್ ಸ್ಟೇಟ್​ ಇದನ್ನು ಖಾತರಿ ಪಡಿಸಿದ್ದು, ಮೂಲ ಪತ್ತೆ ಇಲ್ಲದ ನಾಲ್ಕು ಪ್ರಕರಣಗಳನ್ನು ಗುರುತಿಸಲಾಗಿದ್ದು, ದೇಶಾದ್ಯಂತ ಇದು ಹರಡುತ್ತಿರುವ ಲಕ್ಷಣ ಗೋಚರಿಸಿದೆ ಎಂದು ಹೇಳಿಕೊಂಡಿದೆ.

ಅತಿಹೆಚ್ಚು ಜನಸಾಂದ್ರತೆ ಇರುವ ಈ ಕಿಂಗ್ ಕಂಟ್ರಿಯಲ್ಲಿ 7 ಲಕ್ಷ ಜನ ವಾಸವಿದ್ದಾರೆ. ಚೀನಾದಲ್ಲಿ ಸೋಂಕು ತಗುಲಿರುವ ಸಂಖ್ಯೆಗೆ ಹೋಲಿಸಿದರೆ ಅಮೆರಿಕದಲ್ಲಿ ಭಾರಿ ಕಡಿಮೆ. ಆದಾಗ್ಯೂ, ಇದು ಹರಡುವ ಸೋಂಕು ಆಗಿರುವ ಕಾರಣ ಹೆಚ್ಚಿನ ಮುತುವರ್ಜಿವಹಿಸಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಇನ್ನು, ಕೊರೊನಾ ವೈರಾಣು ಸೋಂಕು ತಗುಲಿದ ವ್ಯಕ್ತಿ ಯಾರು ಎಂಬ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ. ಈ ಕುರಿತು ಎವರ್​ಗ್ರೀನ್ ಹೆಲ್ತ್​ ಮೆಡಿಕಲ್ ಸೆಂಟರ್​ನ ಕಯ್ಸೆ ದಹ್ಲ್​ ಹೇಳಿಕೆ ನೀಡಿದ್ದು, ಕಿರ್ಕ್​ಲ್ಯಾಂಡ್​ನ ಉಪನಗರ ಸೀಟೆಲ್​ನಲ್ಲಿ ಈ ವ್ಯಕ್ತಿಯ ಸಾವು ಸಂಭವಿಸಿದ್ದು, ಹೆಚ್ಚಿನ ಮಾಹಿತಿ ಬಹಿರಂಗಪಡಿಸಲಾಗದು ಎಂದಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ. ಇದರೊಂದಿಗೆ ಅಮೆರಿಕದಲ್ಲೂ ಕೊರೊನಾ ವೈರಾಣು ಸೋಂಕು ಕುರಿತಾದ ಆತಂಕ, ಕಳವಳ ತೀವ್ರವಾಗಿದೆ.

ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಸುದ್ದಿಗೋಷ್ಠಿ ನಡೆಸಿದ್ದು, ಕೊರೊನಾ ವೈರಾಣು ಸೋಂಕಿನ ಬೆಳವಣಿಗೆ ಕುರಿತು ಮಾತನಾಡಿದ್ದಾರೆ. ಪ್ರಯಾಣ ನಿರ್ಬಂಧಗಳನ್ನೂ, ಕೆಲವು ಮುಂಜಾಗ್ರತಾ ಕ್ರಮಗಳನ್ನೂ ಘೋಷಿಸಿದ್ದಾರೆ. (ಏಜೆನ್ಸೀಸ್)