ನ್ಯೂಸ್

ಮದ್ಯದ ಅಮಲಿನಲ್ಲಿ ಗುಂಡು ಹಾರಿಸಿದ ಗನ್‌ಮ್ಯಾನ್

ಬೆಂಗಳೂರು: ಮದ್ಯದ ಅಮಲಿನಲ್ಲಿದ್ದ ಗನ್‌ಮ್ಯಾನ್ ಮತ್ತೊಬ್ಬ ಗನ್‌ಮ್ಯಾನ್ ಮೇಲೆ ಗುಂಡು ಹಾರಿಸಲು ಯತ್ನಿಸಿರುವ ಪ್ರಕರಣ ಜಯನಗರದ ೪ ನೇ ಬ್ಲಾಕ್‌ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಆ.೨೭ ರ ರಾತ್ರಿ ೧೨ ಗಂಟೆಗೆ ಜಯನಗರ ೪ನೇ ಬಿ ಬ್ಲಾಕ್‌ನಲ್ಲಿರುವ ಪಿಜಿಯಲ್ಲಿ ಘಟನೆ ನಡೆದಿದೆ.
ನಿರ್ಮಾಪಕ ಹಾಗೂ ಕಾಂಗ್ರೆಸ್ ಮುಖಂಡ ಉಮಾಪತಿ ಗೌಡ ಅವರ ಸಹೋದರ ದೀಪಕ್‌ಗೌಡ ಅವರ, ಗನ್‌ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಪ್ರಶಾಂತ್‌ಕುಮಾರ್ (೩೯) ಎಂಬ ಗನ್‌ಮ್ಯಾನ್ ಕುಡಿದ ಅಮಲಿನಲ್ಲಿ ಸ್ನೇಹಿತನಾಗಿರುವ ಅನಿಲ್ ಕುಮಾರ್ ಎಂಬ ಗನ್‌ಮ್ಯಾನ್ ಮೇಲೆಯೇ ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ಅನಿಲ್ ಕುಮಾರ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಅನಿಲ್ ಜಸ್ಟ್ ಮಿಸ್:
ಆ.೨೭ರ ಸಂಜೆ ಬಾರ್‌ಗೆ ಹೋಗಿದ್ದ ಪ್ರಶಾಂತ್ ಮತ್ತು ಅನಿಲ್ ಮದ್ಯ ಖರೀದಿಸಿದ್ದರು. ಇಬ್ಬರು ಪಿಜಿ ರೂಮ್ನಲ್ಲೇ ಕುಡಿದು ಪಾರ್ಟಿ ಮಾಡಿದ್ದರು. ರಾತ್ರಿ ೧೦.೩೦ಕ್ಕೆ ಊರಿನ ಗೆಳೆಯ ಅಮಿತ್ ಎಂಬಾತ ಇವರ ರೂಮ್ಗೆ ಬಂದಿದ್ದರು. ಅಮಿತ್ ಪಿಜಿ ಹೊರಗೆ ಮಾತಾಡಿಕೊಂಡು ನಿಂತಿದ್ದ. ಪ್ರಶಾಂತ್ ಪಿಜಿಯಲ್ಲಿ ಊಟ ಮಾಡಿಕೊಂಡಿದ್ದರು. ಈ ವೇಳೆ ತನ್ನ ಪತ್ನಿ ಜತೆಗೆ ಫೋನ್‌ನಲ್ಲಿ ಕಿರುಚಾಡುತ್ತಾ ಮಾತನಾಡುತ್ತಿದ್ದರು. ಆಗ ಕಿರುಚಾಟ ಕೇಳಿ ಬಂದ ಅನಿಲ್ ಅವರು ಯಾಕೆ ಇಷ್ಟು ಜೋರಾಗಿ ಕಿರುಚಾಡುತ್ತಿದ್ದೀಯಾ ಸ್ವಲ್ಪ ನಿಧಾನವಾಗಿ ಮಾತನಾಡು ಎಂದು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ನೀನು ಯಾರೊ ನನ್ನ ಕೇಳುವುದಕ್ಕೆ ಎಂದು ಪ್ರಶ್ನಿಸಿ ತಳ್ಳಿದ ಪ್ರಶಾಂತ್ ಅವರು, ತಮ್ಮ ಬೀರುವಿನಲ್ಲಿದ್ದ ಪಿಸ್ತೂಲ್ ತೆಗೆದು ಅನಿಲ್ ಮೇಲೆ ಫೈರ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕರೆಂಟ್ ಸ್ವಿಚ್ ಮತ್ತು ಬಾತ್ ರೂಮ್ನ ಕನ್ನಡಿ ಒಡೆದು ಪ್ರಶಾಂತ್ ಹುಚ್ಚಾಟ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಪಿಜಿಯಲ್ಲಿ ನಡೆದ ಘಟನೆ ಬಗ್ಗೆ ಅನಿಲ್ ಅವರು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಆಧಾರ ಮೇಲೆ ಫೈರಿಂಗ್ ಮಾಡಿದ್ದ ಪ್ರಶಾಂತ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಶಾಂತ್ ಈ ಹಿಂದೆ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅವರ ಮಗನಿಗೆ ಗನ್‌ಮ್ಯಾನ್ ಆಗಿಯೂ ಕೆಲಸ ಮಾಡಿದ್ದಾರೆ.