ನ್ಯೂಸ್

ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ : ಬಿ 2 ಬೋಗಿ ಸಂಪೂರ್ಣ ಭಸ್ಮ

ಬೆಂಗಳೂರು: ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ (ಮೆಜೆಸ್ಟಿಕ್) ಶನಿವಾರ ಮುಂಜಾನೆ ನಿಂತಿದ್ದ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇದರಿಂದಾಗಿ ರೈಲ್ವೆ ನಿಲ್ದಾಣದಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅವಘಡದ ವೇಳೆ ಪ್ರಯಾಣಿಕರು ಇರದಿದ್ದ ಕಾರಣ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.
ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಲ್‌ನಿಂದ ಹೊರಟಿದ್ದ ಉದ್ಯಾನ್ ಎಕ್ಸ್‌ಪೆಸ್ ರೈಲು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ ಸಂಖ್ಯೆ ೩ ರಲ್ಲಿ ಮುಂಜಾನೆ ೫.೪೫ರ ವೇಳೆ ಬಂದು ನಿಂತಿದೆ. ರೈಲು ಗಾಡಿ ೧೧೩೦೧ ಸಂಖ್ಯೆಯ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿಗೆ ಬೆಳಿಗ್ಗೆ ೭ ಗಂಟೆಯ ವೇಳೆ ಬಿ-೨ ಕೋಚ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ರೈಲಿನ ಬಿ ೧ ಮತ್ತು ಬಿ ೨ ಎಂಬ ಎರಡು ಎ.ಸಿ ಬೋಗಿಗಳಲ್ಲಿ ದಟ್ಟ ಹೊಗೆ ಹೊರಬರತೊಡಗಿದ್ದು, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ೮ ವಾಹನಗಳು ೨ ಗಂಟೆಗೂ ಹೆಚ್ಚು ಕಾಲ ಶ್ರಮಿಸಿ ಬೆಂಕಿ ನಂದಿಸಿತು. ದುರಂತ ಸಂಭವಿಸಿದ ವೇಳೆ ಯಾವುದೇ ಪ್ರಯಾಣಿಕರು ಇಲ್ಲದ ಕಾರಣ ಭಾರೀ ದುರಂತವೊಂದು ತಪ್ಪಿದೆ.
ಬೆಂಕಿಯನ್ನು ತ್ವರಿತವಾಗಿ ನಂದಿಸಿದ್ದರಿಂದ ಸುತ್ತಮುತ್ತಲ ರೈಲುಗಳಿಗೂ ಯಾವುದೇ ಹಾನಿಯುಂಟಾಗಿಲ್ಲ. ಘಟನಾ ಸ್ಥಳಕ್ಕೆ ರೈಲ್ವೆ ಎಸ್.ಪಿ ಸೇರಿ ಇತರೆ ಪೊಲೀಸರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉದ್ಯಾನ್ ಎಕ್ಸ್‌ಪ್ರೆಸ್ ರೈಲು ನಿಲ್ದಾಣಕ್ಕೆ ಬಂದ ಮೇಲೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ರೈಲಿನಿಂದ ಇಳಿದು ಹೋಗಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ಉದ್ಯಾನ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಯಾವುದೇ ಸಮಸ್ಯೆಯಿಲ್ಲ. ಹಾನಿಯಾದ ಬೋಗಿಗಳನ್ನು ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆತಂಕದ ವಾತಾವರಣ:
ದಿಢೀರ್ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಮತ್ತು ಸುತ್ತಮುತ್ತ ದಟ್ಟವಾದ ಹೊಗೆ ಆವರಿಸಿ ಪ್ರಯಾಣಿಕರಲ್ಲಿ ಒಂದು ರೀತಿಯ ಆತಂಕದ ವಾತವರಣ ನಿರ್ಮಾಣವಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ ನಂತರ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.

ರೈಲಿನ ಬಿ-೨ ಎ.ಸಿ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬಿ-೧ ಬೋಗಿ ಗ್ಲಾಸ್ ಹೊಡೆದು ಬೆಂಕಿ ನಂದಿಸಿದ್ದಾರೆ. ಅವಘಡದಲ್ಲಿ ಬಿ-೨ ಬೋಗಿ ಸಂಪೂರ್ಣ ಸುಟ್ಟು ಹೋಗಿದೆ. ಮೇಲ್‌ನೋಟಕ್ಕೆ ಶಾರ್ಟ್‌ಸಕ್ಯುರ್ಟ್‌ನಿಂದ ಅವಘಟ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಎ್ಎಸ್‌ಎಲ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿ ಸ್ಯಾಂಪಲ್ ಸಂಗ್ರಹಿಸಿಕೊಂಡು ಹೋಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ತನಿಖೆಯ ನಂತರ ಅವಘಡಕ್ಕೆ ನಿಖರ ಕಾರಣ ತಿಳಿದು ಬರಲಿದೆ.
ಸೌಮ್ಯಲತಾ, ರಾಜ್ಯ ರೈಲ್ವೇ ಎಸ್.ಪಿ

೮ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಸುಮಾರು ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಲಾಯಿತು.
ಪಿ.ಹರಿಶೇಖರನ್, ಅಗ್ನಿಶಾಮಕ ವಿಭಾಗದ ಎಡಿಜಿಪಿ