ವಿಶಾಖಪಟ್ನಂ ಎಚ್‌ಪಿಸಿಎಲ್‌ ತೈಲ ಸಂಸ್ಕರಣಾಗಾರದಲ್ಲಿ ಬೆಂಕಿ ಅವಘಡ  
ನ್ಯೂಸ್

ಆಂಧ್ರದ HPCL ಪ್ಲಾಂಟ್‌ನಲ್ಲಿ ಅಗ್ನಿ ಅವಘಡ: ಬೆಂಕಿಯ ಕೆನ್ನಾಲಿಗೆ ಬೆಚ್ಚಿಬಿದ್ದ ಸ್ಥಳೀಯರು! | Visakhapatnam HPCL Fire

HPCL Refinery Fire: ಆಂಧ್ರಪ್ರದೇಶದ ವಿಶಾಖಪಟ್ನಂನಲ್ಲಿರುವ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ತೈಲ ಸಂಸ್ಕರಣಾಗಾರದಲ್ಲಿ ನಿನ್ನೆ ತಡರಾತ್ರಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದರಿಂದ ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿದೆ.

ನಗರದ ಗಾಜುವಾಕ ಕೈಗಾರಿಕಾ ಪ್ರದೇಶದಲ್ಲಿರುವ ಈ ಘಟಕದ ಒಳಗಿನಿಂದಲೇ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದ್ದು, ಭಾರಿ ಶಬ್ದದೊಂದಿಗೆ ಸರಣಿ ಸ್ಫೋಟಗಳು ಸಂಭವಿಸಿವೆ. ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲೇ ವ್ಯಾಪಿಸಿ, ಆಕಾಶಕ್ಕೆ ದಟ್ಟವಾದ ಕಪ್ಪು ಹೊಗೆ ಆವರಿಸಿಕೊಂಡಿದ್ದರಿಂದ ಭಯಭೀತರಾದ ಸುತ್ತಮುತ್ತಲ ನಿವಾಸಿಗಳು ತಮ್ಮ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ..

ಘಟನೆ ತಿಳಿಯುತ್ತಿದ್ದಂತೆಯೇ ಎಚ್‌ಪಿಸಿಎಲ್‌ (HPCL) ಆಂತರಿಕ ಅಗ್ನಿಶಾಮಕ ದಳ ಹಾಗೂ ನಗರದ ವಿವಿಧೆಡೆಯಿಂದ ಬಂದ ಹಲವಾರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಭರದಿಂದ ಆರಂಭಿಸಿವೆ.

ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳು ಘಟನೆ ನಡೆದ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದು, ಒಳಗಿದ್ದ ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಬೆಂಕಿ ಬಿದ್ದ ಜಾಗಕ್ಕೆ ಸಾರ್ವಜನಿಕರು ಬರದಂತೆ ತಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಇದನ್ನೂ ಓದಿ: ಭೂಮಿಯ ರಕ್ಷಣಾ ಕವಚವನ್ನೇ ಭೇದಿಸಿದ ಸೌರ ಬಿರುಗಾಳಿ: ವಿಜ್ಞಾನಿಗಳನ್ನೇ ಬೆಚ್ಚಿಬೀಳಿಸಿತು ಹೊಸ ಸಂಶೋಧನೆ...Solar Superstorm

ಪ್ರಸ್ತುತ ಬೆಂಕಿಯನ್ನು ಪೂರ್ಣವಾಗಿ ಹತೋಟಿಗೆ ತರಲು ಸತತ ಪ್ರಯತ್ನ ನಡೆಯುತ್ತಿದೆ. ಘಟನೆಯಲ್ಲಿ ಸಂಭವಿಸಿದ ಜೀವಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ಇನ್ನಷ್ಟೇ ನಿಖರ ಮಾಹಿತಿ ಹೊರಬರಬೇಕಿದೆ.