ಬೆಂಗಳೂರು: ಮೆಜೆಸ್ಟಿಕ್ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನ ಇಂಜಿನ್ನಲ್ಲಿ ದಿಢೀರ್ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಭಾರೀ ದುರಂತವೊಂದು ತಪ್ಪಿದೆ
ರೇಲ್ವೇ ಇಂಜಿನ್ನಿಂದ ಹೊರಬಂದ ದಟ್ಟ ಹೊಗೆಯನ್ನು ನೋಡಿ ಪ್ರಯಾಣಿಕರು ಆತಂಕಗೊಂಡಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಉದ್ಯಾನ್ ರೈಲಿನ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ರೈಲ್ವೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ.
ಈಗಾಗಲೇ ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆಯಿಂದ ಮೆಜೆಸ್ಟಿಕ್ ಸುತ್ತಮುತ್ತ ದಟ್ಟ ಹೊಗೆ ಆವರಿಸಿಕೊಂಡಿತು. ಇದನ್ನು ನೋಡಿ ಜನರು ಒಂದು ಕ್ಷಣ ಗಾಬರಿಯಾದರು.
ಇನ್ನು ರೈಲಿನ ಬೋಗಿಗಳಲ್ಲಿಯೂ ಬೆಂಕಿ ಕಾಣಿಸಿಕೊಂಡಿದೆ. ಈ ಉದ್ಯಾನ್ ಎಕ್ಸ್‌ಪ್ರೆಸ್ ರೈಲು ಮುಂಬೈನಿಂದ ಆಗಮಿಸಿತ್ತು. ರೈಲು ನಿಲುಗಡೆಯಾದ ಬಳಿಕ ಈ ಅಗ್ನಿ ಅವಘಡ ಸಂಭವಿಸಿದೆ. ಚಾಲನೆಯಲ್ಲಿ ಇರುವಾಗ ಸಂಭವಿಸಿದ್ದರೆ ಅನಾಹುತ ನಡೆಯುವ ಸಾಧ್ಯತೆ ಇತ್ತು.
ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿಯನ್ನು ನಂದಿಸಿವೆ. ರೈಲಿನ ಎರಡು ಸ್ಲೀಪರ್ ಕೋಚ್ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರಯಾಣಿಕರು ಇಳಿದು ಹೋದ ಬಳಿಕ ಈ ಅವಘಡ ನಡೆದಿದೆ.
ಬೆಳಗ್ಗೆ 6ಗಂಟೆ ಸುಮಾರಿಗೆ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ನಿಲ್ದಾಣಕ್ಕೆ ಉದ್ಯಾನ್ ಟ್ರೈನ್ ಮುಂಬೈನಿಂದ ಬಂದಿತು. ಮೊದಲು ಎಸಿ ಕೋಚ್ನಲ್ಲಿ ಬೆಂಕಿ ಕಾಣಿಸಿಕೊಂಡಿತು. B1-B2 ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ನಿನ್ನೆ ರಾತ್ರಿ 8.10ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್ನಿಂದ ಉದ್ಯಾನ್ ರೈಲು ಹೊರಟಿತ್ತು. ಇಂದು ಬೆಳಗ್ಗೆ 5.40 ರಿಂದ 6 ಗಂಟೆ ಒಳಗಡೆ ಮೆಜೆಸ್ಟಿಕ್ ರೈಲ್ವೇ ನಿಲ್ದಾಣಕ್ಕೆ ಬಂದು ತಲುಪಿತು. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಎಸಿ ಕೋಚ್ನಿಂದಲೇ ಮೊದಲು ಬೆಂಕಿ ಹೊತ್ತಿಕೊಂಡಿರೋ ಮಾಹಿತಿ ಇದೆ. (ದಿಗ್ವಿಜಯ ನ್ಯೂಸ್)