ನ್ಯೂಸ್

ಅಗ್ನಿ ಅವಘಡ: ಇಬ್ಬರು ಕಾರ್ಮಿಕರು ಸಜೀವ ದಹನ

ಮಂಜುನಾಥ.ಕೆ

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಕಾರ್ಮಿಕರು ಸಜೀವ ದಹನವಾಗಿದ್ದಾರೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಡಬಗೆರೆಯಲ್ಲಿ ಈ ಧಾರುಣ ಘಟನೆ ನಡೆದಿದೆ.

ಕಾರ್ಪೆಂಟರ್ ಹಾಗೂ ಪೇಟಿಂಗ್ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಉದಯ ಭಾನು (೪೦) ಹಾಗೂ ಬಿಹಾರ್ ಮೂಲದ ರೋಷನ್ (೨೩) ಮೃತ ದುದೈವಿಗಳು.

ಮಾಗಡಿ ಮುಖ್ಯರಸ್ತೆ ಕಡಬಗೆರೆ ಮುತ್ತುರಾಯಸ್ವಾಮಿ ದೇವಸ್ಥಾನ ಸಮೀಪದ ಶಿವಾನಿ ಗ್ರೀನ್ಸ್ ಬಡಾವಣೆಯಲ್ಲಿ ಮಂಡ್ಯ ಮೂಲದ, ಇಂಜಿನಿಯರ್ ಸತೀಶ್ ಎಂಬುವರು ನಾಲ್ಕು ಅಂತಸ್ತಿನ ಮನೆಯನ್ನು ಕಟ್ಟಿಸುತ್ತಿದ್ದರು. ಬಹುತೇಕ ಮುಕ್ತಾಯ ಹಂತದಲ್ಲಿದ್ದ ಕಟ್ಟಡದಲ್ಲಿ ಪೇಟಿಂಗ್ ಮತ್ತು ಮರಗೆಲಸ ಹಾಗೂ ಕಬ್ಬಿಣದ ಕೆಲಸಗಳು ಪ್ರಗತಿಯಲ್ಲಿದ್ದವು. ೬ ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಈ ವೇಳೆ ದಿಢೀರನೆ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆಯನ್ನು ಕಂಡು ಅಕ್ಕ ಪಕ್ಕದವರು ಅಗ್ನಿಶಾಮಕ ದಳದವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಗ್ನಿಶಾಮಕ ವಾಹನಗಳೊಂದಿಗೆ ಧಾವಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟರು. ಪೊಲೀಸರು ಸಹ ರಕ್ಷಣಾ ಕಾರ್ಯಕ್ಕೆ ನೆರವಾದರು. ಅಷ್ಟರಲ್ಲಾಗಲೇ ಉದಯ ಭಾನು ಹಾಗೂ ರೋಷನ್ ಕಟ್ಟಡದಲ್ಲೇ ಸುಟ್ಟು ಕರಕಲಾಗಿದ್ದು, ಕಟ್ಟಡದಲ್ಲಿ ಸಿಲುಕಿ ಒರ್ವ ಕಾರ್ಮಿಕನನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಕಟ್ಟಡದ ತುತ್ತ ತುದಿಯಲ್ಲಿದ್ದ ಓರ್ವ ಕಾರ್ಮಿಕ ಪಕ್ಕದಲ್ಲಿದ್ದ ತೆಂಗಿನ ಮರಕ್ಕೆ ಹಾರಿ ಕೆಳಗೆ ಜಾರಿ ಬಂದಿದ್ದಾನೆ. ಮತ್ತೋರ್ವ ನೀರಿನ ಸಂಪಿನಲ್ಲಿ ಅಡಗಿ ಕುಳಿತು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಟ್ಟಡದಲ್ಲೇ ತಂಗಿದ್ದ ಕಾರ್ಮಿಕರು ಅಡುಗೆ ಮಾಡಿಕೊಳ್ಳಲು ಬಳಸುತ್ತಿದ್ದ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿದೆಯೋ ಇಲ್ಲ ಬೇರೆ ಕಾರಣಗಳಿಂದ ಭೀಕರ ಅಗ್ನಿ ದುರಂತ ಸಂಭವಿಸಿರಬಹುದು. ತನಿಖೆಯಿಂದ ಘಟನೆ ಕಾರಣವೇನು ಎಂಬುದು ತಿಳಿದು ಬರಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವಶೇಷ ತೆರವುಗೊಳಿಸಿ:

ನಾಲ್ಕು ಅಂತಸ್ತಿನ ಕಟ್ಟಡ ಬಹುತೇಕ ಬೆಂಕಿಗೆ ಆಹುತಿಯಾಗಿದೆ.ಅದು ಇದೀಗ ವಾಸಕ್ಕೆ ಯೋಗ್ಯವಾಗಿಲ್ಲ. ಘಟನೆಯಿಂದ ಅಕ್ಕ ಪಕ್ಕದ ಮನೆಯವರು ಭಯಭೀತರಾಗಿದ್ದು, ಕಟ್ಟಡದ ಅವಶೇಷಗಳನ್ನು ಪೂರ್ತಿ ತೆರವುಗೊಳಿಸಬೇಕೆಂದು ಮನವಿ ಮಾಡಿದ್ದಾರೆ. ಮೃತ ದೇಹಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿರುವ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.