ನ್ಯೂಸ್

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಹೃದಯವಿದ್ರಾವಕ ಘಟನೆ: ಬೆಂಕಿ ಅವಘಡದಲ್ಲಿ ಕರುಳಕುಡಿಯ ಜೀವ ಉಳಿಸಿ ಪ್ರಾಣಬಿಟ್ಟ ಉದ್ಯಮಿ!

ಶಿವಮೊಗ್ಗ: ಮನೆಯಲ್ಲಿ ವಿದ್ಯುತ್ ಶಾರ್ಟ್​ಸರ್ಕಿಟ್​ನಿಂದ ಉಂಟಾದ ಅಗ್ನಿಅವಘಡದಲ್ಲಿ ಕರುಳಕುಡಿಯನ್ನು ರಕ್ಷಿಸಿ ಉದ್ಯಮಿಯೊಬ್ಬರು ಜೀವತೆತ್ತ ಹೃದಯವಿದ್ರಾವಕ ಘಟನೆ ಭಾನುವಾರ ಬೆಳಗಿನಜಾವ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ನಡೆದಿದೆ.

ಉದ್ಯಮಿ ಶರತ್ ಭೂಪಾಳಂ(39) ಮೃತ ದುರ್ದೈವಿ. ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಎದುರು ಇರುವ ಬಂಗಲೆಯಲ್ಲಿ ಎಸಿ(ಹವಾನಿಯಂತ್ರಿತ)ಗೆ ಅಳವಡಿಸಿದ್ದ ಸ್ಟಪ್ಲೇಜರ್ ಸ್ಫೋಟಗೊಂಡು ಭಾನುವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಮಾತ್ರದಲ್ಲಿ ದಟ್ಟಹೊಗೆ ಮನೆಯಲ್ಲಿ ಆವರಿಸಿದೆ. ಶರತ್ ಅವರು ತಮ್ಮ ಕೋಣೆಯಿಂದ ಮಗ ಸಂಚಿತ್‌ನನ್ನು ರಕ್ಷಣೆ ಮಾಡಿದ್ದಾರೆ. ಈ ಸಂದರ್ಭ ದೇಹ ಸೇರಿದ್ದ ಹೊಗೆಯಿಂದ ತೀವ್ರ ಉಸಿರಾಟದ ತೊಂದರೆಯಾಗಿದೆ. ತಕ್ಷಣ ಅವರನ್ನು ಪಕ್ಕದಲ್ಲಿಯೇ ಇರುವ ನಂಜಪ್ಪ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತ್ತಾದರೂ ಫಲಿಸಲಿಲ್ಲ.

ಅಗ್ನಿಅವಘಡದಲ್ಲಿ ಮನೆಯ ಕೊಠಡಿಯೊಂದು ಸಂಪೂರ್ಣ ಭಸ್ಮವಾಗಿದೆ. ಮನೆಯಲ್ಲಿದ್ದ ಶಶಿಧರ್ ಸೇರಿದಂತೆ ನಾಲ್ವರು ಪ್ರಾಣಾಪಾದಿಂದ ಪಾರಾಗಿದ್ದಾರೆ. ತನ್ನ ಮಕ್ಕಳನ್ನು ರಕ್ಷಣೆ ಮಾಡಿದ ಶರತ್ ಬದುಕುಳಿದಿಲ್ಲ.

ಸ್ವಾತಂತ್ರ್ಯ ಸೇನಾನಿ ಭೂಪಾಳಂ ಚಂದ್ರಶೇಖರಯ್ಯ ಕುಟುಂಬಕ್ಕೆ ಸೇರಿದ್ದ ಶರತ್, ಮಾಚೇನಹಳ್ಳಿಯಲ್ಲಿ ಕೈಗಾರಿಕೆ ನಡೆಸುತ್ತಿದ್ದರು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದರು. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.