ನ್ಯೂಸ್

ಹಣ ವಂಚನೆ! ನಿರ್ಮಾಪಕ ಅರುಣ್ ರೈ ವಿರುದ್ಧ FIR

ಬೆಂಗಳೂರು: ( FIR ) ರಾಷ್ಟ್ರಪ್ರಶಸ್ತಿ ವಿಜೇತ ತುಳು ಸಿನಿಮಾ ನಿರ್ಮಾಪಕ ಅರುಣ್ ರೈ ವಿರುದ್ಧ 9 ಕೋಟಿ ರೂಪಾಯಿ ಹಣ ವಂಚನೆ ಪ್ರಕರಣ ದಾಖಲಾಗಿದೆ.

ಅರುಣ್ ರೈ ವಿರುದ್ಧ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ತುಳುವಿನ ಜೀಟಿಗೆ, ವೀರ ಕಂಬಳ ಸಿನಿಮಾವನ್ನು ಅರುಣ್ ರೈ ನಿರ್ಮಾಣ ಮಾಡಿದ್ದಾರೆ.

ಬೆಂಗಳೂರಿನ ಯಶವಂತಪುರ ತಾಜ್ ಹೋಟೆಲ್‌ನಲ್ಲಿ ಬಂಟ್ವಾಳ ಮೂಲದ ಉದ್ಯಮಿಯನ್ನು  ನಿರ್ಮಾಪಕ ಅರುಣ್ ರೈ ಪರಿಚಯಿಸಿಕೊಂಡಿದ್ದರು. ‘ವೀರ ಕಂಬಳ’  ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಲಾಭಾಂಶದಲ್ಲಿ 60 ಲಕ್ಷ ರೂ. ಕೊಡೋದಾಗಿ ಮೊದಲು ಉದ್ಯಮಿಗೆ ನಂಬಿಸಿ ಹಣ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅರುಣ್ ರೈ ವಿರುದ್ಧ ಪ್ರಕರಣ ದಾಖಲಾಗಿದೆ.

ತಮಿಳುನಾಡಿನ ದಿಂಡಿಗಲ್ ಕಾಳಿ ಸ್ವಾಮಿಯಿಂದ 50 ಕೋಟಿ ಹಣ ಬರಲಿಕ್ಕೆ ಇದೆ, ಪಳನಿ ದೇವಾಲಯದ ಟ್ರಸ್ಟ್ ನಿಂದಲೂ ಸಾಲ ಕೊಡಿಸ್ತೇನೆ, ಜಾರ್ಖಂಡ್ ಸರ್ಕಾರದಿಂದ 50 ಕೋಟಿ ಕೆಲಸದ ಬಿಲ್ ಬಾಕಿ ಇದೆ, ಮಂಗಳೂರಿನ ಗೋಡೌನ್ ನಲ್ಲಿ 40 ಕೋಟಿ ಮೌಲ್ಯದ ಕ್ಯಾಶ್ಯೂ ನಟ್ಸ್ (ಗೋಡಂಬಿ )ಇದೆ ಅದನ್ನು 25 ಕೋಟಿಗೆ ನೀಡ್ತೇನೆ ಎಂದೆಲ್ಲ ಸುಳ್ಳು ಹೇಳಿದ್ದ ನಿರ್ಮಾಪಕ.

ಬೆಂಗಳೂರಿನ ಹಲವು ಕಂಪನಿ ಹಾಗೂ ಕಟ್ಟಡಗಳನ್ನ ತೋರಿಸಿ ಇದೆಲ್ಲವೂ ತನ್ನದೇ ಎಂದು ಹೇಳಿದ್ದ ನಿರ್ಮಾಪಕರ ಅರುಣ್, HSR ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ರಾಜಾಜಿನಗರ, ತುಮಕೂರು ಮೈಸೂರಿನ ಹಲವು ಕಡೆ ಕಚೇರಿಗಳಿಗೆ ಕರೆದೊಯ್ದಿದ್ದ ಅವೆಲ್ಲವೂ ತನ್ನದೇ ಎಂದು ಹೇಳಿಕೊಂಡಿದ್ದ.