ನವದೆಹಲಿ: ಕೊವಿಡ್-19ಗೆ ಕರೊನಿಲ್ ಎಂಬ ಔಷಧಿ ಕಂಡು ಹಿಡಿದಿದ್ದೇವೆ. ಈ ಔಷಧಿಯಲ್ಲಿ ಸೋಂಕು ನಿವಾರಣೆಯಾಗುತ್ತದೆ ಎಂದು ಯೋಗಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಸಂಸ್ಥೆ ಹೇಳಿಕೊಂಡಿದೆ. ಆದರೆ ಕರೊನಿಲ್ಗೆ ಸರ್ಕಾರ ಮನೆ ಹಾಕಲಿಲ್ಲ. ಅದರ ಕ್ಲಿನಿಕಲ್ ಟ್ರಯಲ್ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.
ಕೆಲವು ಸಚಿವರಂತೂ ಯೋಗಗುರು ಬಾಬಾ ರಾಮ್ದೇವ್ಗೆ ಖಡಕ್ ವಾರ್ನ್ ಮಾಡಿದ್ದಾರೆ. ಯಾವ ಕಾರಣಕ್ಕೂ ನಿಮ್ಮ ಔಷಧಿ ಮಾರಲು ಬಿಡುವುದಿಲ್ಲ. ಜನರ ಜೀವದ ಜತೆ ಚೆಲ್ಲಾಟ ಬೇಡ. ಇದೊಂದು ನಕಲಿ ಔಷಧಿ ಎಂದು ಹೇಳಿದ್ದಾರೆ.
ಇದೀಗ ಈ ವಿವಾದ ಮತ್ತೊಂದು ಹಂತಕ್ಕೆ ಹೋಗಿದೆ. ಕೊವಿಡ್-19ಗೆ ಔಷಧಿ ಕಂಡುಹಿಡಿದಿದ್ದೇವೆ ಎಂದು ಪ್ರತಿಪಾದಿಸುತ್ತಿರುವ ಬಾಬಾ ರಾಮ್ ದೇವ್ ಹಾಗೂ ಪತಂಜಲಿ ಯೋಗ ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣ ಸೇರಿ ಒಟ್ಟು ಆರು ಮಂದಿಯ ವಿರುದ್ಧ ಜೈಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕರೊನಿಲ್ನಿಂದ ಕರೊನಾ ಸೋಂಕು ನಿವಾರಣೆಯಾಗುತ್ತದೆ ಎಂದು ಪ್ರಚಾರ ಮಾಡುತ್ತಿರುವ ಪತಂಜಲಿ ಸಂಸ್ಥೆ ಜನರನ್ನು ದಾರಿತಪ್ಪಿಸುತ್ತಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಜೈಪುರದ ಜ್ಯೋತಿನಗರ ಪೊಲೀಸ್ ಠಾಣೆಯಲ್ಲಿ ಬಾಬಾ ರಾಮ್ದೇವ್, ಡಾ. ಆಚಾರ್ಯ ಬಾಲಕೃಷ್ಣನ್, ಅನುರಾಗ್ ವರ್ಷನೆ, ಜೈಪುರ ನಿಜಾಮ್ಸ್ ಇನ್ಸ್ಟ್ರಿಟ್ಯೂಶನ್ ಆಫ್ ಮೆಡಿಕಲ್ ಇನ್ಸ್ಟಿಟ್ಯೂಟ್ನ ಬಲ್ಬೀರ್ ಸಿಂಗ್ ತೋಮಾರ್ ಮತ್ತು ನಿರ್ದೇಶಕ ಅನುರಾಗ್ ತೋಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಲಾಕ್ಡೌನ್ನಲ್ಲಿ ಪೊಲೀಸ್ ಪೇದೆಯ ಕ್ರೂರತನ; 13 ವರ್ಷದ ಬಾಲಕಿ ಮೇಲೆ ರೇಪ್
ಕರೊನಿಲ್ನ್ನು ಕರೊನಾ ಸೋಂಕಿತರ ಮೇಲೆ ಪ್ರಯೋಗ ಮಾಡಲು ನಾವು ಅನುಮತಿ ಪಡೆದಿದ್ದೇವೆ. ಭಾರತೀಯ ವೈದ್ಯಕೀಯ ಮಂಡಳಿಯ ಅಂಗಸಂಸ್ಥೆಯಾಗಿರುವ ಸಿಟಿಐಆರ್ ಅನುಮತಿ ನೀಡಿದೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳೂ ನಮ್ಮ ಬಳಿ ಇವೆ. ಜೈಪುರದ ನಿಮ್ಸ್ನಲ್ಲಿ 100 ಕರೊನಾ ರೋಗಿಗಳ ಮೇಲೆ ಈ ಔಷಧಿ ಪ್ರಯೋಗ ಮಾಡಲಾಗಿದೆ. ಶೇ.69ರಷ್ಟು ಜನ ಮೂರೇ ದಿನಗಳಲ್ಲಿ ಕರೊನಾ ಮುಕ್ತರಾಗಿದ್ದಾರೆ. ಮತ್ತೂ ಹಲವು ಮಂದಿ ಏಳು ದಿನಗಳಲ್ಲಿ ಗುಣಮುಖರಾಗಿದ್ದಾರೆ ಎಂದು ನಿಮ್ಸ್ ನಿರ್ದೇಶಕ ಬಲಬೀರ್ ತೋಮಾರ್ ಹೇಳಿದ್ದರು. ಇದನ್ನೂ ಓದಿ: ಪತಂಜಲಿಯಿಂದ “ಕರೊನಿಲ್” ಔಷಧ ಬಿಡುಗಡೆ: ನೂರಕ್ಕೆ ನೂರು ಗುಣಪಡಿಸುವ ಭರವಸೆ!
ಆದರೆ ನಂತರ ನಡೆದ ಹಲವು ಬೆಳವಣಿಗೆಗಳಲ್ಲಿ ಪತಂಜಲಿ ಸಂಸ್ಥೆಗೆ ಹಿನ್ನಡೆ ಆಗಿದೆ. ಆಯುಷ್ ಇಲಾಖೆ ಅಂತರ ಕಾಯ್ದುಕೊಂಡಿದ್ದಲ್ಲದೆ, ಕ್ಲಿನಿಕಲ್ ಪ್ರಯೋಗ ನಡೆಸಿದ ಬಗ್ಗೆ ಎಲ್ಲ ರೀತಿಯ ದಾಖಲೆ, ಮಾಹಿತಿಯನ್ನೂ ನೀಡಬೇಕು ಎಂದು ಹೇಳಿದೆ.
ಈ ಮಧ್ಯೆ ಪತಂಜಲಿ ಯೋಗ ಸಂಸ್ಥೆ ಸುಮ್ಮನೆ ಪ್ರಚಾರ ಪಡೆಯುತ್ತ, ಜನರ ಹಾದಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಬಿಹಾರ್ ಕೋರ್ಟ್ನಲ್ಲೂ ಕೇಸ್ ದಾಖಲಾಗಿದ್ದು, ಅದರ ವಿಚಾರಣೆ ಜೂ.30ರಂದು ನಡೆಯಲಿದೆ. ರಾಜಸ್ಥಾನ ಸರ್ಕಾರ ಕೂಡ ಪತಂಜಲಿ ಸಂಸ್ಥೆಗೆ ನೋಟಿಸ್ ನೀಡಿ, ಕ್ಲಿನಿಕಲ್ ಟ್ರಯಲ್ನ ಸಮಗ್ರ ಮಾಹಿತಿ ನೀಡಿ ಎಂದು ಸೂಚಿಸಿದೆ. (ಏಜೆನ್ಸೀಸ್)