ನ್ಯೂಸ್

ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್ಐಆರ್; ಕಾನೂನಿನ ಚೌಕಟ್ಟಿನೊಳಗೆ ಬಂದರೆ ಕ್ರಮ|FIR against Chandrasekhara Swamiji; Action within the framework of law

ಬೆಂಗಳೂರು: ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದೆಂಬ ಚಂದ್ರಶೇಖರ ಸ್ವಾಮೀಜಿ ಅವರ ಹೇಳಿಕೆ ಕುರಿತು ಪೊಲೀಸರು ಕಾನೂನಿನ ದೃಷ್ಟಿಯಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಾರೆ(FIR against Chandrasekhara Swamiji; Action within the framework of law) ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಹೇಳಿದರು.

ವಿಧಾನಸೌಧದ ಆವರಣದಲ್ಲಿ ಕೆಂಗಲ್ ಹನುಮಂತಯ್ಯ ಅವರ ಪುಣ್ಯ ಸ್ಮರಣೆಯ ಪ್ರಯುಕ್ತ ಅವರ ಪ್ರತಿಮೆಗೆ ಮಾಪಾರ್ಪಣೆ ಮಾಡಿದ ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಕಾನೂನಿನ ಚೌಕಟ್ಟಿನೊಳಗೆ ಬಂದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲವಾದರೆ ಇಲ್ಲ ಎಂದು ಪ್ರತಿಕ್ರಿಯಿಸಿದರು.

ಜೆಡಿಎಸ್ ಬಿಡುವಾಗ ಮಾಡಿದ್ದ ನಾಟಕವನ್ನೇ ಈಗ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಜೆಡಿಎಸ್‌ನಿಂದ ನನ್ನನ್ನು ಉಚ್ಛಾಟಿಸಲಾಯಿತು, ನಾನು ಬಿಡಲಿಲ್ಲ. ಜೆಡಿಎಸ್ ಪಕ್ಷ ವನ್ನು ಕಟ್ಟಿದವರು ನಾವು. ಜೆಡಿಎಸ್ ಈಗ ಜಾತ್ಯಾತೀತವಾಗಿ ಉಳಿದಿದೆಯೇ? ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ಕೋಮುವಾದಿಗಳ ಜೊತೆಗೆ ಸೇರಿದ ಮೇಲೆ ಯಾವ ಸೆಕ್ಯೂಲರ್ ಆಗಿದೆ? ಸಂವಿಧಾನದಲ್ಲಿ ಜಾತ್ಯಾತೀತ, ಸಮಾಜವಾದಿ ಎಂದು ಸೇರ್ಪಡೆಯಾಗಿದೆ. ಸರ್ವೋಚ್ಚ ನ್ಯಾಯಾಲಯವೂ ಜಾತ್ಯಾತೀತ ಇರಲೇಬೇಕೆಂದು ಹೇಳಿದ್ದಾರೆ. ಜೆಡಿಎಸ್ ನವರಿಗೆ ಪಕ್ಷ ಯಾವ ಹಿನ್ನೆಲೆಯಲ್ಲಿ ಕಟ್ಟಲಾಗಿದೆ ಎಂದು ಗೊತ್ತಿಲ್ಲ. ಪಕ್ಷ ರಚನೆಗೊಂಡಾಗ ಕುಮಾರಸ್ವಾಮಿ ಇರಲಿಲ್ಲ. ನಾನು ದೇವೇಗೌಡ, ಇಬ್ರಾಹಿಂ, ಸತೀಶ್ ಜಾರಕಿಹೊಳಿ, ಮಹದೇವಪ್ಪ, ವೆಂಕಟೇಶ್, ಲಕ್ಷ್ಮೀ ಸಾಗರ್ ಸೇರಿ ಆಗಿದ್ದು. ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರಾದರು, ನಾನು ರಾಜ್ಯಾಧ್ಯಕ್ಷನಾದೆ ಎಂದು ತಿಳಿಸಿದರು.

ನನ್ನನ್ನು ದೇವೇಗೌಡರು ಉಚ್ಚಾಟಿಸಿದರು. ನಂತರ ನಾನು ಬೇರೆ ದಾರಿ ಇಲ್ಲದೆ ಅಹಿಂದ ಸಮಾವೇಶ ನಡೆಸಿದೆ. ಹಾಸನದಲ್ಲಿಯೂ ಸಮಾವೇಶ ಮಾಡಿದ್ದೆ. ಈಗ ಇಡೀ ರಾಜ್ಯದ ಜನರಿಗೆ ಕೃತಜ್ಞತೆ ಹೇಳಲು ಕಾಂಗ್ರೆಸ್ ಮತ್ತು ಸ್ವಾಭಿಮಾನಿಗಳ ಒಕ್ಕೂಟದಿಂದ ಸಮಾವೇಶ ಏರ್ಪಡಿಸಲಾಗಿದೆ. ಕಾಂಗ್ರೆಸ್ ಮತ್ತು ಸ್ವಾಭಿಮಾನಿಗಳ ಜಂಟಿ ಆಶ್ರಯದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಆಹ್ವಾನಿಸಲಾಗಿದೆ . ಪಕ್ಷವು ಇದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.