ಲಖನೌ (ಉತ್ತರ ಪ್ರದೇಶ): ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳವರೆಗೆ ನಿಮ್ಮ ಮನೆಯ ಬಾಗಿಲು ಅಥವಾ ಬಾಲ್ಕನಿ ಬಳಿಗೆ ಬಂದು ದೀಪ, ಕ್ಯಾಂಡಲ್, ಟಾರ್ಚ್ ಅಥವಾ ಮೊಬೈಲ್ ಫ್ಲಾಷ್ ಲೈಟ್ ಬಿಡಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕರೆ ನೀಡಿದ್ದರೆ, ಉತ್ತರ ಪ್ರದೇಶದ ಬಿಜೆಪಿ ಮಹಿಳಾ ಘಟಕದ ಮಂಜು ತಿವಾರಿ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ.
ತಾವು ಗುಂಡು ಹಾರಿಸಿರುವ ದೃಶ್ಯವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಹಿನ್ನೆಲೆಯಲ್ಲಿ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಎಫ್‌ಐಆರ್ ದಾಖಲಿಸಿಕೊಂಡಿದೆ.
ತಮ್ಮ ಕ್ರಮಕ್ಕೆ ಸ್ಪಷ್ಟನೆ ನೀಡಿರುವ ನಾಯಕಿ, ‘ಇಡೀ ನಗರ ದೀಪ ಬೆಳಗಿ ಖುಷಿಯಿಂದ ಇರುವುದನ್ನು ಕಂಡೆ. ಇದು ನನಗೆ ದೀಪಾವಳಿಯನ್ನು ನೆನಪಿಸಿತು. ಅದಕ್ಕೆ ತಡೆದುಕೊಳ್ಳಲಾರದ ಖುಷಿಯ ಭರದಲ್ಲಿ ಅದನ್ನು ಸೆಲೆಬ್ರೇಟ್ ಮಾಡಲು ಗುಂಡು ಹಾರಿಸಿದೆ’ ಎಂದಿದ್ದಾರೆ. ಜತೆಗೆ, ತಮ್ಮಿಂದ ತಪ್ಪಾಗಿದೆ ಎಂದೂ ಕ್ಷಮೆ ಕೋರಿದ್ದಾರೆ. ಕ್ಷಮೆಯ ಕುರಿತಂತೆ ಅವರು ಟ್ವೀಟ್ ಕೂಡ ಮಾಡಿದ್ದಾರೆ.
ಈ ರಿವಾಲ್ವರ್ ಆಕೆಯ ಪತಿ ಓಂ ಪ್ರಕಾಶ್ ಅವರಿಗೆ ಸೇರಿದ್ದು ಎನ್ನಲಾಗಿದೆ. ಆಕಾಶದ ಕಡೆಗೆ ರಿವಾಲ್ವರ್ ಗುರಿ ಮಾಡಿದ್ದ ಮಂಜು ಬೇಕಾಬಿಟ್ಟಿ ಗುಂಡು ಹಾರಿಸಿದ್ದಾರೆ. ಇದಕ್ಕೂ ಮುನ್ನ ಮಂಜು ತಿವಾರಿ ತಮ್ಮ ಮನೆಯ ಅಂಗಳದಲ್ಲಿ ದೀಪ ಹಚ್ಚಿದ್ದರು. ಆ ಬಳಿಕ ಟೆರೇಸ್ ಮೇಲೆ ಏರಿ ಗುಂಡು ಹಾರಿಸಿದ್ದಾರೆ. ಈ ದೃಶ್ಯಗಳನ್ನು ಪತಿ ಓಂ ಪ್ರಕಾಶ್ ಅವರೇ ಚಿತ್ರೀಕರಣ ಮಾಡಿದ್ದಾರೆ ಎನ್ನಲಾಗಿದೆ.