ಧರ್ಮಾಪುರದ ಉದ್ದೂರು ಕಾವಲ್ ಗ್ರಾಮ ಪಂಚಾಯಿತಿ ನಿರ್ಗಮಿತ ಪಿಡಿಒ ನವೀನ್ ಅವರನ್ನು ಮಂಗಳವಾರ ಸನ್ಮಾನಿಸಿ ಬೀಳ್ಕೊಡಲಾಯಿತು. ಮುಬಾರಕ್ ಭಾನು ಡಿ.ರಫೀಕ್, ಅರುಣ್, ಪದ್ಮಮ್ಮ ನಾರಾಯಣಗೌಡ, ವೀರಭದ್ರಸ್ವಾಮಿ, ನಂದೀಶ್, ರಾಮಭೋವಿ ಇತರರಿದ್ದರು. 
ನ್ಯೂಸ್

ನಾಳೆಯ ಕೆಲಸವನ್ನು ಇಂದೇ ಮಾಡಿ ಮುಗಿಸಿ

ಎಂ.ರವಿ

ಧರ್ಮಾಪುರ: ಸರ್ಕಾರಿ ಕೆಲಸದಲ್ಲಿ ಇಂದಿನ ಕೆಲಸ ಇಂದೇ ಮಾಡಬೇಕು. ನಾಳೆಯ ಕೆಲಸವನ್ನೂ ಇಂದೇ ಮಾಡಿ ಮುಗಿಸಬೇಕು ಎಂಬ ಮನೋಭಾವವನ್ನು ಎಲ್ಲ ಅಧಿಕಾರಿ, ಸಿಬ್ಬಂದಿ ಹೊಂದಬೇಕು ಎಂದು ನಿರ್ಗಮಿತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನವೀನ್ ಹೇಳಿದರು.

ರತ್ನಪುರಿಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಉದ್ದೂರ್ ಕಾವಲ್ ಗ್ರಾಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಇಲ್ಲಿಗೆ ಐದು ವರ್ಷವಾಯಿತು. ನನ್ನ ಅವಧಿಯಲ್ಲಿ ಯಾವುದೇ ತೊಂದರೆ, ತಕರಾರಿಗೆ ಅವಕಾಶ ಕೊಡದೆ ಗ್ರಾಮ ಪಂಚಾಯಿತಿ ಸದಸ್ಯರು ಸಹಕರಿಸಿದರು ಎಂದರು.

ಗ್ರಾಪಂ ಅಧ್ಯಕ್ಷೆ ಮುಬಾರಕ್ ಭಾನು ಡಿ.ರಫೀಕ್ ಮಾತನಾಡಿ, ವರ್ಗಾವಣೆಗೊಂಡ ನವೀನ್ ಅವರ ಮಾರ್ಗದರ್ಶನದಲ್ಲಿ ನರೇಗಾ ಸೇರಿದಂತೆ ಇತರ ಯೋಜನೆಯಡಿ ನಡೆದ ಕಾಮಗಾರಿಗಳಲ್ಲಿ ಪಂಚಾಯಿತಿ ಉತ್ತಮ ಸಾಧನೆ ಮಾಡಿದೆ. ಕೆಲಸದ ವಿಷಯದಲ್ಲಿ ರಾಜಿ ಮಾಡಿಕೊಳ್ಳದೆ ಜನಾಡಳಿತ ನೀಡಿ ಕೆಲಸದಲ್ಲಿ ಶಿಸ್ತು, ನೀತಿ-ನಿಯಮ ತಂದು ಪಂಚಾಯಿತಿ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಪಂ ನೂತನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಅಧಿಕಾರ ಸ್ವೀಕರಿಸಿ ಮಾತನಾಡಿ, ಪಂಚಾಯಿತಿಯ ಸರ್ವತೋಮುಖ ಅಭಿವೃದ್ಧಿ ಹಾಗೂ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಮನ್ವಯತೆ ಅಗತ್ಯ. ಆ ಸಮನ್ವಯದೊಂದಿಗೆ ಎಲ್ಲ ಸದಸ್ಯರು ಸಾರ್ವಜನಿಕರ ಜತೆಗೂಡಿ ಕಾರ್ಯನಿರ್ವಹಿಸುವ ಮೂಲಕ ಉದ್ದೂರ್ ಕಾವಲ್ ಗ್ರಾಮ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯನ್ನಾಗಿ ಮಾಡೋಣ ಎಂದರು.

ಉಪಾಧ್ಯಕ್ಷೆ ಪದ್ಮಮ್ಮ ನಾರಾಯಣಗೌಡ, ಮಾಜಿ ಅಧ್ಯಕ್ಷ ವೀರಭದ್ರಸ್ವಾಮಿ, ನಂದೀಶ್, ಸದಸ್ಯರಾದ ರಾಮಭೋವಿ, ವಿಜಯೇಂದ್ರ ಕುಮಾರ್, ಮೀನಾ ದೇವರಾಜ್, ರತ್ನಾ, ಶಾಂತಿ, ಶೋಭಾ ವಿಠಲ್ ಪಂಚಾಯಿತಿ ನೌಕರರು ಹಾಜರಿದ್ದರು.