ನ್ಯೂಸ್

ಒಂದು ಗಂಟೆಗಿಂತ ಹೆಚ್ಚು ಕಾಲ ಮಾರ್ಕೆಟ್​ನಲ್ಲಿದ್ದರೆ ಫೈನ್​! ಆದೇಶ ಹೊರಡಿಸಿದ ಜಿಲ್ಲಾಡಳಿತ

ನಾಸಿಕ್​: ಮಹಾರಾಷ್ಟ್ರದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಲಾರಂಭಿಸಿದೆ. ಪ್ರತಿ ಜಿಲ್ಲೆಯಲ್ಲೂ ಅನೇಕ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದೀಗ ಈ ಜಿಲ್ಲೆಯ ಮಾರ್ಕೆಟ್​ನಲ್ಲಿ ಒಂದು ಗಂಟೆಗಿಂತ ಹೆಚ್ಚು ಹೊತ್ತು ಕಾಲ ಕಳೆದರೂ ಫೈನ್​ ಬೀಳಲಿದೆ. ಅಂತದ್ದೊಂದು ನಿಯಮವನ್ನು ಜಿಲ್ಲಾಡಳಿತ ಮಾಡಿದೆ.

ಮಹಾರಾಷ್ಟ್ರದ ನಾಸಿಕ್​ನಲ್ಲಿ ಇಂತಹ ಕಠಿಣ ನಿಯಮ ತೆಗೆದುಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಮಾರುಕಟ್ಟೆಗಳಿಗೆ ಬರುವ ಜನರಿಗೆ ಎರಡು ಪ್ರತ್ಯೇಕ ದ್ವಾರಗಳನ್ನು ನಿರ್ಮಿಸಲಾಗಿದೆ. ಒಂದು ದ್ವಾರದಲ್ಲಿ ಬರುವವರು ಇನ್ನೊಂದು ದ್ವಾರದಲ್ಲಿ ಹೋಗಬೇಕು. ಮಾರುಕಟ್ಟೆಗೆ ಬರುವಾಗ ಐದು ರೂಪಾಯಿಯ ಟಿಕೆಟ್​ ಖರೀದಿಸಬೇಕು. ಅದರಲ್ಲಿ ಸಮಯವನ್ನು ನಮೂದಿಸಲಾಗಿರುತ್ತದೆ. ವಾಪಾಸು ಹೋಗುವಾದ ಟಿಕೆಟ್​ ಪರಿಶೀಲಿಸಲಾಗುವುದು. ಯಾರು ಒಂದು ಗಂಟೆಗಿಂತ ಹೆಚ್ಚು ಹೊತ್ತು ಮಾರುಕಟ್ಟೆಯಲ್ಲಿರುತ್ತಾರೋ ಅವರಿಗೆ ತಲಾ 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ನಾಸಿಕ್​ನಲ್ಲಿ ಸೋಮವಾರ 2,847 ಕರೊನಾ ಪ್ರಕರಣಗಳು ದೃಢವಾಗಿವೆ. ಈ ಮೂಲಕ ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 1,74,682ಕ್ಕೆ ಏರಿಕೆಯಾಗಿದೆ. (ಏಜೆನ್ಸೀಸ್​)