ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಿಂದ ಪೂರ್ಣಗೊಳ್ಳದೇ ಬಾಕಿ ಉಳಿದಿರುವ ವಸತಿ ಯೋಜನೆಗಳಿಗೆ ಮುಕ್ತಿ ನೀಡಲು ಹಣಕಾಸು ಹೊಂದಾಣಿಕೆಗಾಗಿ ಹುಡುಕಾಟ ಆರಂಭವಾಗಿದೆ. ಜತೆಗೆ ಮುಂದಿನ ವರ್ಷದಿಂದ ಗುರಿಯನ್ನೇ ಕಡಿಮೆ ಮಾಡಿಕೊಂಡು ಯೋಜನೆಗಳನ್ನು ತುರ್ತಾಗಿ ಪೂರ್ಣಗೊಳಿಸುವ ಕಡೆಗೂ ಸರ್ಕಾರ ಗಮನ ಹರಿಸಿದೆ.
2013ರಿಂದ 2018ರ ಅವಧಿಯಲ್ಲಿ ಆರಂಭವಾಗಿ ಅಪೂರ್ಣವಾಗಿರುವ ರಾಜೀವ್ಗಾಂಧಿ ಗ್ರಾಮೀಣ ವಸತಿ ನಿಗಮ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿಗಳಿಗೆ ಸೇರಿದ 2.32 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು 8 ಸಾವಿರ ಕೋಟಿ ರೂ. ಅಗತ್ಯವಿದೆ. ಇದು ಹೊರತುಪಡಿಸಿ ಒಂದು ಲಕ್ಷ ಮುಖ್ಯಮಂತ್ರಿ ವಸತಿ ಯೋಜನೆಯ ಮನೆಗಳು ಪ್ರತ್ಯೇಕವಾಗಿವೆ.
ಯೋಜನೆಯ ವೆಚ್ಚ ಎಷ್ಟು?: ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ 1.80 ಲಕ್ಷ ಮನೆಗಳು ಹಾಗೂ ರಾಜೀವ್ಗಾಂಧಿ ಗ್ರಾಮೀಣ ವಸತಿ ನಿಗಮದಲ್ಲಿ 52 ಸಾವಿರ ಮನೆಗಳು ಅರ್ಧಕ್ಕೆ ನಿಂತಿವೆ. ಪ್ರತಿಯೊಂದು ಮನೆಯ ವೆಚ್ಚ 7 ಲಕ್ಷ ರೂ.ಗಳಾಗಿವೆ. ಇದರಲ್ಲಿ 3 ಲಕ್ಷ ರೂ. ಸಬ್ಸಿಡಿ ಇದ್ದರೆ, 4 ಲಕ್ಷ ರೂ. ಫಲಾನುಭವಿಗಳ ವಂತಿಕೆಯಾಗಿದೆ. ಆದರೆ ಯಾವ ಫಲಾನುಭವಿಯೂ ತಮ್ಮ ಪಾಲಿನ ವಂತಿಕೆ ಕಟ್ಟಲು ಮುಂದೆ ಬರುತ್ತಿಲ್ಲ. ಇದರಿಂದಾಗಿಯೇ ಮನೆಗಳ ನಿರ್ಮಾಣ ಪೂರ್ಣವಾಗುತ್ತಿಲ್ಲ. ಬ್ಯಾಂಕ್ಗಳಿಂದ ಸಾಲ ಪಡೆದು ಯೋಜನೆಯನ್ನು ಪೂರ್ಣಗೊಳಿಸುವ ಬಗ್ಗೆಯೂ ಚರ್ಚೆ ನಡೆದು ಸಂರ್ಪಸಲಾಗಿದೆ. ಆದರೆ ಯಾವ ಬ್ಯಾಂಕ್ಗಳೂ ಸಾಲ ನೀಡಲು ಮುಂದಾಗುತ್ತಿಲ್ಲ.
ಹಣಕಾಸು ಇಲಾಖೆಗೆ ಸೂಚನೆ: ಸಿಎಂ ಸಿದ್ದರಾಮಯ್ಯ ಅವರು ವಸತಿ ಸಚಿವ ಜಮೀರ್ ಅಹಮದ್ ಜತೆೆ ನಡೆಸಿದ ಸಭೆಯಲ್ಲಿ ಹಂತ ಹಂತವಾಗಿ ಹಣ ಬಿಡುಗಡೆಗೆ ಏನೇನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಹಣಕಾಸು ಇಲಾಖೆ ಸಹ ಈ ನಿಟ್ಟಿನಲ್ಲಿ ಪರಿಶೀಲನೆಯ ಭರವಸೆ ನೀಡಿ ಹಲವು ಮಾರ್ಗಗಳಿಗೆ ಹುಡುಕಾಟ ನಡೆಸಿದೆ.
ಗುರಿ ಏನು?: 2.32 ಲಕ್ಷ ಮನೆಗಳನ್ನು 2024ರ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ ಫಲಾನುಭವಿಗಳಿಗೆ ವಿತರಣೆ ಮಾಡಬೇಕು ಎಂಬ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.
ವಸತಿ ಸಚಿವರು ಹೇಳಿದ್ದೇನು?: ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವ ಜಮೀರ್ ಅಹಮದ್ ಮುಖ್ಯಮಂತ್ರಿಗೆ ಸಲಹೆಯೊಂದನ್ನು ನೀಡಿದ್ದಾರೆ. ಇಲಾಖೆಗೆ ನೀಡುವ ಅನುದಾನ ಹೆಚ್ಚಿಸಲು ಸಾಧ್ಯವಿಲ್ಲದ ಕಾರಣ ಮುಂದಿನ ವರ್ಷಗಳಲ್ಲಿ ಮನೆಗಳ ಗುರಿಯನ್ನೇ ಕಡಿಮೆ ಮಾಡುವುದು. ಆಗ ಆಯಾ ವರ್ಷವೇ ಯೋಜನೆಗಳನ್ನು ಪೂರ್ಣಗೊಳಿಸಿ ಮನೆಗಳನ್ನು ಫಲಾನುಭವಿಗಳಿಗೆ ನೀಡಲು ಪ್ರಯತ್ನ ಮಾಡಬಹುದು. ಒಂದು ಯೋಜನೆ ಪೂರ್ಣವಾದ ನಂತರವೇ ಮತ್ತೊಂದು ಯೋಜನೆ ಕೈಗೊಳ್ಳಲಾಗುವುದು ಎಂಬ ಸಲಹೆಗೆ ಸಿಎಂ ಸಹ ತಾತ್ವಿಕವಾಗಿ ಸಮ್ಮತಿಸಿದ್ದಾರೆ.
ಖಾಸಗಿಯವರ ಜತೆ ಚರ್ಚೆ: ಕೆಲವು ಕಡೆಗಳಲ್ಲಿ ಮನೆಗಳನ್ನು ನಿರ್ವಿುಸಿದ್ದಾರೆ. ಆದರೆ ಅಲ್ಲಿಗೆ ಹೋಗಲು ಸಂಪರ್ಕ ರಸ್ತೆಯೇ ಇಲ್ಲ. ಕೇವಲ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ತರಾತುರಿಯಲ್ಲಿ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಇಂತಹ ಯೋಜನೆಗಳಲ್ಲಿ ಬಿಡದಿಯ ಯೋಜನೆಯೂ ಒಂದು. ಅಲ್ಲಿ ಟೋಯೊಟಾದವರು ಈಗ ಅರ್ಧಕ್ಕೆ ನಿಂತಿರುವ ಮನೆಗಳನ್ನು ಪಡೆದು ತಮ್ಮ ಸಿಬ್ಬಂದಿಗೆ ವಸತಿ ಮಾಡಿಕೊಳ್ಳಲು ಮುಂದೆ ಬಂದಿದ್ದಾರೆ. ಬೇರೆ ಬೇರೆ ಖಾಸಗಿಯವರನ್ನು ಸಂರ್ಪಸಲು ನಿರ್ಧರಿಸಲಾಗಿದೆ.
ಫಲಕ ಹಾಕಲು ನಿರ್ಧಾರ: ಅಂಬೇಡ್ಕರ್, ಬಸವ ಹೀಗೆ ಅನೇಕ ವಸತಿ ಯೋಜನೆಗಳು ಜಾರಿಯಲ್ಲಿವೆ. ಆದರೆ ಯಾವ ಮನೆ, ಯಾವ ಯೋಜನೆಯಲ್ಲಿ ನಿರ್ವಿುಸಿದ್ದು ಎಂಬ ಮಾಹಿತಿ ಇರುವುದಿಲ್ಲ. ಆದ್ದರಿಂದ ಮನೆ ಮುಂದೆ ಯಾವ ಯೋಜನೆಯಲ್ಲಿ ನಿರ್ಮಾಣ ಮಾಡಲಾಗಿದೆ. ಎಷ್ಟು ವೆಚ್ಚವಾಗಿದೆ, ನಿರ್ವಣವಾದ ವರ್ಷ ಯಾವುದು ಎಂಬ ಪೂರ್ಣ ವಿವರಗಳ ಫಲಕ ಅಳವಡಿಸಲು ನಿರ್ಧರಿಸಲಾಗಿದೆ.
ಬಡವರಿಗಾಗಿ ನಿರ್ವಿುಸಲ್ಪಡುತ್ತಿರುವ ಮನೆಗಳು 2013 ರಿಂದ ಪೂರ್ಣಗೊಳ್ಳದೇ ನನೆಗುದಿಗೆ ಬಿದ್ದಿವೆ. ಶಾಶ್ವತವಾದ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಲೇ ಮುಖ್ಯಮಂತ್ರಿ ಅವರ ಜತೆ ಚರ್ಚೆ ನಡೆಸಲಾಗಿದೆ. 2024ರ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವುದು ನಮ್ಮ ಉದ್ದೇಶವಾಗಿದೆ.
| ಜಮೀರ್ ಅಹಮದ್ ಖಾನ್ ವಸತಿ ಸಚಿವ