ನ್ಯೂಸ್

ಇರಾಕ್​ನಲ್ಲಿ ಹೂತುಹೋಗಿದ್ದ ನಗರ ಪತ್ತೆ

ಬಾಗ್ದಾದ್: ಟೈಗ್ರಿಸ್ ನದಿಯಲ್ಲಿ 3,400 ವರ್ಷದ ಹಿಂದೆ ಹೂತುಹೋಗಿದ್ದ ನಗರವೊಂದು ಪತ್ತೆಯಾಗಿದ್ದು ಇತಿಹಾಸಕಾರರು ಮತ್ತು ಪುರಾತತ್ವ ಶಾಸ್ತ್ರಜ್ಞರು ನಗರದ ಐತಿಹಾಸಿಕ ಮಹತ್ವವನ್ನು ತಿಳಿಯಲು ಪ್ರಯತ್ನ ಆರಂಭಿಸಿದ್ದಾರೆ.

ಭಾರಿ ಬರಗಾಲದಿಂದಾಗಿ ಮೊಸುಲ್ ಜಲಾಶಯದ ನೀರು ಬರಿದಾಗಲು ಶುರುವಾದಾಗ ಕಂಚಿನ ಯುಗದ ಈ ನಗರ ಪತ್ತೆಯಾಗಿದೆ. ಜರ್ಮನಿ ಮತ್ತು ಖುರ್ದಿಶ್ ಪುರಾತತ್ವತಜ್ಞರ ಅಂತಾರಾಷ್ಟ್ರೀಯ ತಂಡವೊಂದು ಇರಾಕ್​ನ ಖುರ್ದಿಸ್ತಾನ್ ವಲಯದಲ್ಲಿ ಈ ನಗರವನ್ನು ಪತ್ತೆ ಹಚ್ಚಿದ್ದಾರೆ. 100 ಪ್ರಾಚೀನ ಮಣ್ಣಿನ ಚೌಕಟ್ಟುಗಳನ್ನು (ಟ್ಯಾಬ್ಲೆಟ್) ಸಂಗ್ರಹಿಸಲು ಅವರಿಗೆ ಸಾಧ್ಯವಾಗಿದೆ.

ಇನ್ನಷ್ಟು ಪರಿಶೋಧನೆ ನಡೆಸಿದಾಗ ಮಣ್ಣಿನ ಇಟ್ಟಿಗೆಯಿಂದ ನಿರ್ವಿುಸಿದ್ದ ವಸತಿ ಪ್ರದೇಶ ಪತ್ತೆಯಾಗಿದೆ. ಅದರಲ್ಲಿ ಅರಮನೆ, ಬಹುಮಹಡಿ ಕಟ್ಟಡಗಳು ಅನೇಕ ಗೋಪುರಗಳು ಮತ್ತಿತರ ಬೃಹತ್ ನಿರ್ವಣಗಳು ಕಂಡು ಬಂದಿವೆ. ಕ್ರಿಸ್ತಪೂರ್ವ 1475ರಿಂದ ಕ್ರಿಸ್ತಪೂರ್ವ 1275ರ ನಡುವೆ ಈ ನಗರ ನಿರ್ವಣಗೊಂಡಿರಬಹುದೆಂದು ಅಂದಾಜು ಮಾಡಲಾಗಿದೆ. ಉತ್ತರ ಯೂಫ್ರಟಸ್-ಟೈಗ್ರಿಸ್ ವಲಯದಲ್ಲಿ ಆಗ ಮಿತ್ತಾನಿ ಸಾಮ್ರಾಜ್ಯ ಆಳ್ವಿಕೆ ನಡೆಸುತ್ತಿತ್ತು.