ನ್ಯೂಸ್

ಉಗ್ರರಿಗೆ ಹವಾಲಾ ಹಣ; ಕೇರಳ, ಕರ್ನಾಟಕ, ಬಿಹಾರದಲ್ಲಿ ಜಾಲ ಸಕ್ರಿಯ | ಪ್ರವೀಣ್ ಹತ್ಯೆಗೂ ನಂಟು

ಕೀರ್ತಿನಾರಾಯಣ ಸಿ.
ಬೆಂಗಳೂರು: ಭಯೋತ್ಪಾದಕ ಕೃತ್ಯಗಳಿಗೆ ಹವಾಲಾ ದಂಧೆ ಮೂಲಕ ಆರ್ಥಿಕ ನೆರವು ಸಿಗುತ್ತಿರುವ ವಿಚಾರ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ತನಿಖೆಯಿಂದ ದೃಢಪಟ್ಟಿದೆ. ಅರಬ್ ದೇಶಗಳು ಸೇರಿ ವಿದೇಶಗಳಿಂದ ಉಗ್ರ ಚಟುವಟಿಕೆಗೆ ಹಣ ಪೂರೈಕೆಯಾಗುತ್ತಿದ್ದು, ಕೇರಳ, ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹವಾಲಾ ಜಾಲ ದೊಡ್ಡಮಟ್ಟದಲ್ಲಿ ಸಕ್ರಿಯವಾಗಿರುವುದನ್ನು ಎನ್​ಐಎ ಪತ್ತೆಹಚ್ಚಿದೆ. ಅಲ್ಲದೆ, ಭಾರತದಲ್ಲಿ ಇಸ್ಲಾಂ ಧರ್ಮ ಸ್ಥಾಪನೆಗೆ ನಾಲ್ಕು ಹಂತದಲ್ಲಿ ಸಂಚಿನ ಯೋಜನೆ ರೂಪಿಸಿಕೊಂಡಿದ್ದ ಸ್ಪೋಟಕ ಸಂಗತಿಯನ್ನು ದೆಹಲಿ ಎನ್​ಐಎ ತಂಡ ಹೊಸದಾಗಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.

ಕಾನೂನು ಬಾಹಿರ ಚಟುವಟಿಕೆ ಆರೋಪದಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಸಂಘಟನೆಯನ್ನು ನಿಷೇಧಿಸಿದ್ದರೂ ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸುವುದನ್ನು ಅದು ಮುಂದುವರಿಸಿದೆ. ಹಿಂಸಾಚಾರ ಹಾಗೂ ಉಗ್ರ ಸಿದ್ಧಾಂತಗಳನ್ನು ಪ್ರಚುರಪಡಿಸಲು ಬೇಕಾದ ಆರ್ಥಿಕ ನೆರವನ್ನು ಶಂಕಿತರಿಗೆ ನೀಡಲಾಗುತ್ತಿದೆ. ಬಿಹಾರದ ಪುಲ್ವಾರಿ ಶರೀಫ್ ಪ್ರಕರಣದ ಮುಂದುವರಿದ ತನಿಖೆಯ ಭಾಗವಾಗಿ ಮಾ. 7ರಂದು ಕರ್ನಾಟಕ ಮತ್ತು ಕೇರಳದ 8 ಕಡೆಗಳಲ್ಲಿ ನಡೆದ ಎನ್​ಐಎ ಶೋಧದಲ್ಲಿ ಕೇರಳ, ಕರ್ನಾಟಕ, ಬಿಹಾರ ಸೇರಿ ಇನ್ನಿತರ ರಾಜ್ಯಗಳಲ್ಲಿ ನಡೆಯುತ್ತಿರುವ ಹವಾಲಾ ದಂಧೆ ಬಯಲಾಗಿದೆ. ಭಾರತದ ಹೊರಗಿನಿಂದ ಹಣ ಸಂಗ್ರಹಿಸಿ, ಶಂಕಿತರಿಗೆ ಪೂರೈಸುತ್ತಿದ್ದ ಪಿಎಫ್​ಐನ ಐವರನ್ನು ಬಂಧಿಸಲಾಗಿದೆ. ಪಿಎಫ್​ಐ ಕಚೇರಿಯ 19 ಹಿರಿಯ ಪದಾಧಿಕಾರಿಗಳ ವಿರುದ್ಧ ಮಾ.18ರಂದು (ಶನಿವಾರ) ಎನ್​ಐಎ ಚಾರ್ಜ್​ಶೀಟ್ ಸಲ್ಲಿಸಿದೆ.

ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೂ ಪಿಎಫ್​ಐ ಕಚೇರಿಗಳ ಮೇಲಿನ ದಾಳಿ ಪ್ರಕರಣಕ್ಕೂ ನಂಟಿರುವ ಬಗ್ಗೆ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ನೆಟ್ಟಾರು ಹತ್ಯೆ ಪ್ರಕರಣದಲ್ಲಿ 20 ಶಂಕಿತ ಉಗ್ರರ ವಿರುದ್ಧ 2023 ಜ.20ರಂದು ಎನ್​ಐಎ ಚಾರ್ಜ್​ಶೀಟ್ ಸಲ್ಲಿಸಿತ್ತು. ಹಿಂದು ಮುಖಂಡರ ಹತ್ಯೆಗೈದು ಭಯೋತ್ಪಾದನೆ, ಕೋಮುದ್ವೇಷ ಮತ್ತು ಅಶಾಂತಿ ಸೃಷ್ಟಿಸಲು ಪಿಎಫ್​ಐ ಕಿಲ್ಲರ್ ಸ್ಕಾ್ವಡ್’ಗಳ ಹೆಸರಲ್ಲಿ ರಹಸ್ಯ ತಂಡಗಳನ್ನು ರಚಿಸಿ, 2047ರ ವೇಳೆಗೆ ಇಡೀ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆ ತರಲು ಸಂಚು ರೂಪಿಸಿತ್ತು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿತ್ತು. ಈಗ ದೆಹಲಿ ಪ್ರಕರಣದಲ್ಲಿ ಸಲ್ಲಿಸಿರುವ 5ನೇ ಚಾರ್ಜ್​ಶೀಟ್​ನಲ್ಲೂ ಭಾರತದಲ್ಲಿ ಇಸ್ಲಾಂ ಧರ್ಮ ಸ್ಥಾಪನೆಗೆ ನಾಲ್ಕು ಹಂತದಲ್ಲಿ ಯೋಜನೆ ರೂಪಿಸಿದ್ದ ಸಂಗತಿಯನ್ನು ಎನ್​ಐಎ ನಮೂದಿಸಿದೆ. ಭಯೋತ್ಪಾದಕ ಕೃತ್ಯವೆಸಲು ಪಿಎಫ್​ಐ ಸದಸ್ಯರು ಸಂಚು ರೂಪಿಸಿದ್ದಕ್ಕೆ ಸಾಕ್ಷ್ಯಾಧಾರ ಸಿಕ್ಕಿರುವ ಬಗ್ಗೆಯೂ ದೋಷಾರೋಪ ಪಟ್ಟಿಯಲ್ಲಿ ವಿವರಿಸಿದೆ. ಪಿಎಫ್​ಐ ಚಟುವಟಿಕೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ, ರಾಜಸ್ಥಾನ, ತೆಲಂಗಾಣ, ಕೇರಳ ಮತ್ತು ತಮಿಳುನಾಡಿನ 5 ಪ್ರಕರಣಗಳಲ್ಲಿ ಕಳೆದೊಂದು ವಾರದಲ್ಲಿ ಎನ್​ಐಎ ತಂಡ 5 ಚಾರ್ಜ್​ಶೀಟ್ ಸಲ್ಲಿಸಿದೆ. ಒಟ್ಟು 105 ಆರೋಪಿಗಳ ವಿರುದ್ಧ ಬೇರೆ ಬೇರೆ ಸೆಕ್ಷನ್​ಗಳಡಿ ಆರೋಪಪಟ್ಟಿ ಸಲ್ಲಿಸಿದೆ ಎಂದು ಗೊತ್ತಾಗಿದೆ.

ಯುವಕರ ಹತ್ಯೆಗೆ ಕಾಯುತ್ತಿದ್ದಾಗ ಸೆರೆ: ಬಿಹಾರದ ಫುಲ್ವಾರಿ ಶರೀಫ್ ಮತ್ತು ಮೋತಿಹಾರಿ ಪ್ರದೇಶದ ಪಿಎಫ್​ಐ ಕಾರ್ಯಕರ್ತರು ಗೌಪ್ಯವಾಗಿ ಉಗ್ರ ಚಟುವಟಿಕೆ ನಡೆಸುತ್ತಿದ್ದರು. ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಿರ್ದಿಷ್ಟ ಸಮುದಾಯದ ಯುವಕರನ್ನು ಗುರಿಯಾಗಿಸಿಕೊಂಡು ಹತ್ಯೆಗೂ ಸಂಚು ರೂಪಿಸಿದ್ದರು. ಫುಲ್ವಾರಿ ಶರೀಪ್ ಪ್ರದೇಶದಲ್ಲಿ ಕೃತ್ಯವೆಸಗಲು ಸಂಚು ರೂಪಿಸಿದ್ದ 7 ಶಂಕಿತರನ್ನು ಬಂಧಿಸಲಾಗಿತ್ತು. ಇದೇ ಪ್ರಕರಣ ಎನ್​ಐಎಗೆ ವರ್ಗಾವಣೆಯಾಗಿ, ಮಾ. 7ರಂದು ಕೇರಳ ಮತ್ತು ಕರ್ನಾಟಕದ 8 ಕಡೆಗಳಲ್ಲಿ ಶಂಕಿತರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಹವಾಲಾ ದಂಧೆಗೆ ಸಂಬಂಧಿಸಿದ ದಾಖಲೆ ಪತ್ರಗಳು ಎನ್​ಐಎಗೆ ಸಿಕ್ಕಿವೆ.

ಹವಾಲಾ ಎಂದರೇನು?: ತೆರಿಗೆ ವಂಚಿಸಲು, ಭೂಗತವಾಗಿ ಹಾಗೂ ಅಕ್ರಮವಾಗಿ ನಡೆಯುವ ಹಣಕಾಸು ವ್ಯವಸ್ಥೆಯನ್ನು ಹವಾಲಾ ಎಂದು ಕರೆಯಲಾಗುತ್ತದೆ. ನಂಬಿಕೆಯ ಆಧಾರದ ಮೇಲೆ ಹವಾಲಾ ಏಜೆಂಟರ ಮೂಲಕ ಈ ದಂಧೆ ನಡೆಯುತ್ತದೆ. ಒಂದು ಸ್ಥಳದಿಂದ ಅಥವಾ ವ್ಯಕ್ತಿಯಿಂದ ನೇರವಾಗಿ ಇನ್ನೊಂದು ಸ್ಥಳ ಅಥವಾ ವ್ಯಕ್ತಿಗೆ ಹಣ ತಲುಪುವುದಿಲ್ಲ. ಸಂಪರ್ಕ ಜಾಲಗಳ ಮುಖೇನ ಹಣ ವರ್ಗಾವಣೆಯಾಗುತ್ತದೆ. ಯಾವುದೇ ತೆರಿಗೆ ಇಲ್ಲದೆ, ದಾಖಲಾತಿ ಇಲ್ಲದೆ ಹಣ ತಲುಪಬೇಕಾದ ಜಾಗಕ್ಕೆ ತಲುಪುತ್ತದೆ. ಸಂಕೇತಾಕ್ಷರ, ಸಂಜ್ಞೆ ಅಥವಾ ಹರಿದ ನೋಟುಗಳನ್ನು ಕೋಡ್​ವರ್ಡ್​ಗಳಾಗಿ ಬಳಸಲಾಗುತ್ತದೆ. ಭಯೋತ್ಪಾದನೆ, ಮಾದಕ ವಸ್ತು ಸಾಗಾಟ ಸೇರಿ ಅಕ್ರಮ ಚಟುವಟಿಕೆಗಳಿಗೆ ಹಣ ಸಾಗಿಸಲು ಈ ಹವಾಲಾ ದಂಧೆ ಬಳಸಲಾಗುತ್ತದೆ. ಹವಾಲಾ ದಂಧೆಯ ಮಧ್ಯವರ್ತಿ ತನ್ನ ಕೆಲಸಕ್ಕೆ ಕಮೀಷನ್ ಪಡೆಯುತ್ತಾನೆ.

ಹತ್ತು ರಾಜ್ಯಗಳಲ್ಲಿ ಖಾತೆ!

ಪಿಎಫ್​ಐಗೆ ಸೇರಿದ 37 ಹಾಗೂ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿರುವ 19 ಹಿರಿಯ ಪದಾಧಿಕಾರಿಗಳಿಗೆ ಸೇರಿದ 40 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಗುವಾಹಟಿ, ಬೆಂಗಳೂರು, ಪಶ್ಚಿಮ ಬಂಗಾಳದ ಸುಂಡಿಪುರ, ಇಂಫಾಲ್, ಕೋಜಿಕೋಡ್, ಚೆನ್ನೈ, ನವದೆಹಲಿ, ರಾಜಸ್ಥಾನದ ಜೈಪುರ, ಹೈದರಾಬಾದ್ ಹಾಗೂ ಕರ್ನಲ್​ನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದ ಬಗ್ಗೆ ಎನ್​ಐಎ ಹೇಳಿದೆ.

ಯಾರಿಗೆ ಹವಾಲಾ ಹಣ?

ವಿದೇಶಗಳಿಂದ ಹಣ ಸಂಗ್ರಹಿಸುತ್ತಿದ್ದ ಪಿಎಫ್​ಐ ಮುಖಂಡರು, ಕರ್ನಾಟಕ, ಕೇರಳ ಮತ್ತು ಬಿಹಾರ ರಾಜ್ಯಗಳಿಂದ ಹವಾಲಾ ದಂಧೆಯ ಮೂಲಕ ವಿಲೇವಾರಿ ಮಾಡುತ್ತಿದ್ದರು. ಶಂಕಿತರ ಹೆಸರಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಹಣ ವರ್ಗಾವಣೆ ಮಾಡುವುದು ಒಂದೆಡೆಯಾದರೆ ಹೆಚ್ಚಾಗಿ ನಗದು ಮೂಲಕ ತಲುಪಿಸುತ್ತಿದ್ದರು. ಸಮಾಜದಲ್ಲಿ ಉಗ್ರ ಕೃತ್ಯವೆಸಗಿ ಶಾಂತಿ ಕದಡಿ ಗಲಭೆ ಸೃಷ್ಟಿಸಲು ಹವಾಲಾ ಹಣದಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರಗಳು ಹಾಗೂ ಮದ್ದು-ಗುಂಡುಗಳನ್ನು ಖರೀದಿಸಿ ಸಂಗ್ರಹಿಸುತ್ತಿದ್ದರು ಎಂದು ಎನ್​ಐಎ ತಿಳಿಸಿದೆ.

ಭಯೋತ್ಪಾದಕರ ಟಾರ್ಗೆಟ್ ಏನು?

  • 2047ರ ವೇಳೆಗೆ ಇಡೀ ಭಾರತ ದಲ್ಲಿ ಇಸ್ಲಾಮಿಕ್ ಆಳ್ವಿಕೆ ತರಲು, ಈಗಿನಿಂದಲೇ ಹೋರಾಟ.
  • ಉಗ್ರ ಸಂಘಟನೆ ಸದಸ್ಯರಿಗೆ ತರಬೇತಿ ನೀಡಿ, ಶಸ್ತ್ರಾಸ್ತ್ರ ಮತ್ತು ಮದ್ದು-ಗುಂಡುಗಳ ಸಂಗ್ರಹ
  • ನಿರ್ದಿಷ್ಟ ಸಮುದಾಯ ಹಾಗೂ ಗುಂಪುಗಳ ವ್ಯಕ್ತಿಗಳ ಹತ್ಯೆಗೈಯ್ಯುವ ಮೂಲಕ ಅಶಾಂತಿ ಸೃಷ್ಟಿ.

4 ಹಂತದ ಸಂಚು

  • ಇಸ್ಲಾಂ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎಂದು ಬಿಂಬಿಸಿ ಯುವಕರನ್ನು ಒಟ್ಟುಗೂಡಿಸುವುದು.
  • ಸಂಘಟನೆ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿ, ಹಿಂಸಾಚಾರ ಸೃಷ್ಟಿಸುವುದು.
  • ಹಿಂದುಳಿದ ವರ್ಗಗಳ ಜತೆ ಮೈತ್ರಿ ಮಾಡಿ ಕೊಂಡು ಹಿಂದುಗಳನ್ನು ವಿಭಜಿಸುವುದು.
  • ನ್ಯಾಯಾಂಗ, ಮಿಲಿಟರಿ ಹಾಗೂ ಪೊಲೀಸ್ ವ್ಯವಸ್ಥೆಯ ಒಳಗೆ ನುಸುಳುವುದು.