ಕೋಲಾರ: ಮಹಿಳೆಯರು ಆರ್ಥಿಕವಾಗಿ ಸಧೃಡರಾಗಬೇಕಾದರೆ ಸ್ವಯಂ ಉದ್ಯೋಗ ಕೈಗೊಳ್ಳಬೇಕು, ಆ ಮೂಲಕ ಇತರರಿಗೂ ಕೆಲಸ ಕಲ್ಪಿಸಲು ಮುಂದಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಹೇಳಿದರು.
ನಗರ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಟೈಲರಿಂಗ್ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಶನಿವಾರ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಮಹಿಳೆಯರ ಸರ್ವಾಂಗೀಣ ಬೆಳವಣಿಗೆ ಮತ್ತು ಆರ್ಥಿಕ ಅಭಿವೃದ್ದಿಗೆ ಸ್ವ ಉದ್ಯೊಗವು ಸಹಕಾರಿ ಎಂದು ತಿಳಿಸಿದರು.
ಆತ್ಮಸ್ಥೆ$ರ್ಯ, ಶ್ರದ್ದೆ, ಪ್ರಾಮಾಣಿಕತೆಯ ಗುಣಗಳು ಇದ್ದಾಗ ಬದುಕಿನಲ್ಲಿ ಎಂತಹ ಸಾಧನೆಯನ್ನಾದರೂ ಸಾಧಿಸಬಹುದು. ಸಾಧಿಸುವ ಛಲ ಇದ್ದಾಗ ಬದುಕಿನಲ್ಲಿ ಮಹತ್ವದ ಗುರಿ ತಲುಪಲು ಸಾಧ್ಯ ಎಂದು ತಿಳಿಸಿದರು.
ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ ಸಿಗಲಿಲ್ಲ ಎಂದು ಕೊರಗುಬೇಡ. ಚಿಂತಿಸುತ್ತ ಕೂರುವ ಬದಲು ಸ್ವ ಉದ್ಯೋಗ ಆರಂಭಿಸಿ, ಮತ್ತಿಬ್ಬರಿಗೆ ಕೆಲಸ ಕೊಡುವುದು ಅತ್ಯಂತ ಶ್ರೇಷ್ಠ ಕೆಲಸ. ಜನಸಂಖ್ಯೆ ಹೆಚ್ಚಳವಿರುವುದರಿಂದ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಎಲ್ಲರಿಗೂ ಸರ್ಕಾರಿ ಹಾಗೂ ಖಾಸಗಿ ಕೆಲಸಗಳು ಸಿಗುವುದು ಕಷ್ಟಕರ. ಸ್ವ ಉದ್ಯೋಗದ ಮೂಲಕವು ಜೀವನ ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ತರಬೇತಿ ಸಂಸ್ಥೆಯ ನಿರ್ದೇಶಕ ಸಿ.ಯಲ್ಲೇಶ್ ಮಾತನಾಡಿ, ಟೈಲರಿಂಗ್ ವೃತ್ತಿಯು ಮಹಿಳೆಯರ ಸಬಲೀಕರಣ ಮತ್ತು ಹಣ ಸಂಪಾದನೆಗೆ ಸಹಕಾರಿಯಾದ ವೃತ್ತಿ ಎಂದು ಹೇಳಿದರು.
ಪ್ರತಿಯೊಬ್ಬರು ಜೀವನದಲ್ಲಿ ಎಷ್ಟೇ ಸಮಸ್ಯೆಗಳು ಬಂದರೂ, ಅವೆಲ್ಲವನ್ನೂ ಮೀರಿ ಬದುಕುವ ಆತ್ಮಸ್ಥೆ$ರ್ಯವನ್ನು ಗಳಿಸಿಕೊಳ್ಳಬೇಕು. ಶ್ರಮಪಟ್ಟು ತಾಳ್ಮೆಯಿಂದ ವರ್ತಿಸಿದರೆ, ಗುರಿ ತಲುಪುವುದರ ಜೊತೆಗೆ ಸಮಾಜದಲ್ಲಿ ಹೆಸರುಗಳಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ತರಬೇತುದಾರರಾದ ಕೆ.ವಿ.ವಿಜಯ್ ಕುಮಾರ್, ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ, ಲೋಕೇಶ್, ಎಚ್.ಆರ್ ಮಂಜುನಾಥ್, ಎನ್.ವಿ.ನಾರಾಯಣಸ್ವಾಮಿ, ಅರ್ಪಿತಾ, ವಿಶ್ವನಾಥ್, ಪ್ರಭಾಸ್ ಮತ್ತಿತರರು ಹಾಜರಿದ್ದರು.