ಶಿಕಾರಿಪುರ: ಜನರ ಮನ ಅರಿತು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅರಿವು ಮೂಡಿಸುವ ಮತ್ತು ಕಾರ್ಯಕ್ಷೇತ್ರದಲ್ಲಿ ಅವರನ್ನು ತೊಡಗಿಸುವ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರಂತರವಾಗಿ ಮಾಡುತ್ತಿದೆ ಎಂದು ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಹೇಳಿದರು.
ಸಾಂಸ್ಕೃತಿಕ ಭವನದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮತ್ತು ಜನಜಾಗೃತಿ ವೇದಿಕೆಯಿಂದ ಸೋಮವಾರ ಆಯೋಜಿಸಿದ್ದ ಗಾಂಧಿಸ್ಮತಿ ಮತ್ತು ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅಕ್ಷರ, ಸ್ವಾಭಿಮಾನ, ಕಾಯಕ ಮತ್ತು ಆರ್ಥಿಕ ಸದೃಢತೆ, ಸ್ವಾವಲಂಬನೆಗೆ ಪೂರಕವಾಗಿ ಹಲವು ಯೋಜನೆಗಳನ್ನು ರೂಪಿಸಿ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ಯೋಜನೆಗಳಾಗಲಿ ಆರ್ಥಿಕ ಶಿಸ್ತು, ಸಮರ್ಥ ನಾಯಕತ್ವ, ಸಿಬ್ಬಂದಿ ಶ್ರಮ ಇರದಿದ್ದರೆ ವಿಫಲವಾಗುತ್ತವೆ. ಆದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಇದ್ಯಾವುದರ ಕೊರತೆ ಇರದಿದ್ದುದರಿಂದ ಯಶಸ್ಸು ಕಂಡಿದೆ ಎಂದರು.
ಧರ್ಮಸ್ಥಳ ಯೋಜನೆಯು ಕೃಷಿಗೆ ಪೂರಕವಾದ, ರೈತರಿಗೆ ಅನುಕೂಲ ಆಗಲೆಂದು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅಲ್ಲದೆ ಹೆಣ್ಣು ಮಕ್ಕಳು, ಕೃಷಿಕರು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.
ಪುರಸಭೆ ಉಪಾಧ್ಯಕ್ಷೆ ರೂಪಾ ಮಂಜುನಾಥ್, ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಅಧ್ಯಕ್ಷ ಕಾಳಿಂಗರಾಜ್, ಮಾಜಿ ನಿರ್ದೇಶಕ ಪ್ರೇಮ್‌ಕುಮಾರ್ ಗೌಡ, ಬಿ.ಸಿ.ಟ್ರಸ್ಟ್ ನಿರ್ದೇಶಕ ಬಾಬುನಾಯ್ಕ, ಸಾಗರ ಯೋಜನಾಧಿಕಾರಿ ಶಾಂತಾನಾಯ್ಕ, ಶಿಕಾರಿಪುರ ಯೋಜನಾಧಿಕಾರಿ ನಂಜುಂಡಿ ಅಣ್ಣಪ್ಪ ಇತರರಿದ್ದರು.