ಕೋಲಾರ: ಹೆಚ್ಚು ವಿಶ್ವವಿದ್ಯಾಲಯ ಸ್ಥಾಪನೆಯಾದರೆ ಆರ್ಥಿಕ ಮುಗ್ಗಟ್ಟು ಉಂಟಾಗಿ, ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಆದರೂ, ಹಿಂದಿನ ಸರ್ಕಾರ ರಾಜ್ಯದಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆ ಏಕೆ ಹೆಚ್ಚು ಮಾಡಿತು ಎಂಬುದು ಗೊತ್ತಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ನಗರ ಹೊರವಲಯದ ನಂದಿನಿ ಪ್ಯಾಲೇಸ್ನಲ್ಲಿ ಸೋಮವಾರ ಏರ್ಪಡಿಸಿದ್ದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವದಲ್ಲಿ ಮಾತನಾಡಿದರು.
ಖಾಸಗಿ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚುತ್ತಿದ್ದು, ಮತ್ತೊಂದು ಕಡೆ ಸ್ವಾಯತ್ತ ವಿಶ್ವವಿದ್ಯಾಲಯವಾಗಿಸಿಕೊಳ್ಳಲು ಹೆಚ್ಚಿನ ಬೇಡಿಕೆ ಬರುತ್ತಿದೆ. ಖಾಸಗಿ ವಿವಿ ಸ್ಥಾಪಿಸಲು ಅನುಮತಿ ಕೋರಿ ಬಹಳ ಒತ್ತಡ ಬರುತ್ತಿದೆ. ಆದರೆ, ಅನುಮತಿ ನೀಡುವುದನ್ನು ನಮ್ಮ ಸರ್ಕಾರ ಈಗ ನಿಲ್ಲಿಸಿದೆ ಎಂದು ತಿಳಿಸಿದರು.
ಖಾಸಗಿ ವಿಶ್ವವಿದ್ಯಾಲಯಗಳು ಹೆಚ್ಚಿದರೆ ಮುಂದೆ ಸರ್ಕಾರಿ ವಿಶ್ವವಿದ್ಯಾಲಯಗಳು ಪ್ರಮಾಣ ಪತ್ರ ಕೊಡಲು ಸೀಮಿತವಾಗುತ್ತವೆ. ಖಾಸಗಿ ವಿಶ್ವವಿದ್ಯಾಲಯ ಸಂಬಂಧ ಸಾಧಕ&ಬಾಧಕದ ಬಗ್ಗೆ ಚರ್ಚಿಸಿ ನಿಯಮ ರೂಪಿಸಲಾಗುವುದು. ಖಾಸಗಿ ಅಟಾನಮಸ್ಗೆ ಅನುಮತಿ ನೀಡಿದರೆ ಅವರು ಹಿಡಿತಕ್ಕೆ ಸಿಗುವುದಿಲ್ಲ ಎಂದು ಹೇಳಿದರು.
ಇವತ್ತಿನ ಪರಿಸ್ಥಿತಿಯಲ್ಲಿ ಬಹಳ ಆರ್ಥಿಕ ಭಾರ ಉಂಟಾಗಿದೆ. ದೊಡ್ಡಮಟ್ಟದ ದುಷ್ಪರಿಣಾಮ ಬೀರಿದೆ. ಪ್ರಾರಂಭದಲ್ಲಿ ಸ್ವಾಯತ್ತ ವಿಶ್ವವಿದ್ಯಾಲಯಕ್ಕೆ ನಾನೂ ಅನುಮತಿ ನೀಡಿದ್ದೆ. ನಂತರ ನಿಲ್ಲಿಸಿದೆ ಎಂದರು.
ಕುಲಪತಿ ಪ್ರೊ.ನಿರಂಜನ ವಾನಳ್ಳಿ ವಾರ್ಷಿಕ ವರದಿ ಮಂಡಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ.ಕೆ.ತಿಪ್ಪೇಸ್ವಾಮಿ, ಆಡಳಿತ ಪ್ರಭಾರ ಕುಲಸಚಿವೆ ಪ್ರೊ.ಡಿ.ಕುಮುದಾ, ಸಿಂಡಿಕೇಟ್ ಸದಸ್ಯರಾದ ಸೀಸಂದ್ರ ಗೋಪಾಲಗೌಡ, ಡಾ.ಬಿ.ಆರ್.ಸುಪ್ರೀತ್, ಅರ್ಬಾಜ್ ಪಾಷಾ, ವೆಂಕಟೇಶಪ್ಪ ಹಾಜರಿದ್ದರು.
ಹಲವು ಕೋರ್ಸ್ ಬದಲಾವಣೆಗೆ ಚಿಂತನೆ
ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಪದವಿ ವಿಭಾಗದ ಹಲವು ಕೋರ್ಸ್ಗಳಲ್ಲಿ ಬದಲಾವಣೆ ತರಲಾಗುತ್ತಿದೆ. ತಾಂತ್ರಿಕ ಶಿಕ್ಷಣದಲ್ಲಿ ಕೈಗಾರಿಕಾ ಸ್ನೇಹಿ ವಿಷಯ ಅಳವಡಿಸಲಾಗುತ್ತಿದೆ. ಕೌಶಲಾಧಾರಿತ ವಿಷಯಗಳನ್ನು ಪಠ್ಯದಲ್ಲಿ ಸೇರಿಸಲಾಗುತ್ತಿದೆ ಎಂದ ಸಚಿವರು, ಉದ್ಯೋಗಾವಕಾಶ ಒದಗಿಸಲು ತಯಾರಿ ಮಾಡಿಕೊಳ್ಳಬೇಕು. ಮಹಿಳೆಯರು ಎಲ್ಲ ವಿಭಾಗಗಳಲ್ಲಿ ಮುಂದೆ ಬರುತ್ತಿರುವುದು ಹೆಮ್ಮೆಯ ವಿಷಯ. ವಿಸ್ಟ್ರಾನ್ ಸೇರಿದಂತೆ ಸ್ಥಳಿಯ ಕೈಗಾರಿಕೆಗಳಲ್ಲಿ ಮಹಿಳಾ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದ್ದು, ಭವಿಷ್ಯದಲ್ಲಿ ಉನ್ನತ ಉದ್ಯೋಗಾವಕಾಶಗಳು ಲಭಿಸಲಿವೆ ಎಂದರು.
ಬಾಕ್ಸ್…
ಶೀಘ್ರ 1ನೇ ಹಂತದ ಕಾಮಗಾರಿ ಪೂರ್ಣ
ಚಿಕ್ಕಬಳ್ಳಾಪುರ ಜಿಲ್ಲೆಯ ಅಮರಾವತಿಯಲ್ಲಿ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ನ ಮೊದಲ ಹಂತದ ಕಾಮಗಾರಿ ಕೆಲವೇ ದಿನಗಳಲ್ಲಿ ಮುಗಿಯಲಿದೆ. 2ನೇ ಹಂತದ ಅಭಿವೃದ್ಧಿ ಕೆಲಸಕ್ಕೆ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಆಸಕ್ತಿ ತೋರಿದ್ದು, ಸದ್ಯದಲ್ಲಿ ಕಾಮಗಾರಿ ಆರಂಭವಾಗಲಿದೆ. ಎರಡನೇ ಹಂತಕ್ಕೆ 80ಕೋಟಿ ರ್ಖಚಾಗಲಿದೆ. ವಿಶ್ವವಿದ್ಯಾಲಯ ಸ್ವಂತ ಸಂಪನ್ಮೂಲ ಬಳಸಿಕೊಂಡು ಕಾಮಗಾರಿ ನಡೆಸುತ್ತಿದೆ ಎಂದು ಸಚಿವರು ತಿಳಿಸಿದರು.
ಶಿಕ್ಷಣಕ್ಕೆ ಹೂಡುವ ಅನುದಾನ ವೆಚ್ಚವಲ್ಲ
ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಶಿಕ್ಷಣದ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ವೃದ್ಧಿ ಸಾಧಿಸಬಹುದು ಎಂದು ಬೆಂಗಳೂರು ವಿಶ್ವವಿದ್ಯಾಲಯ ವಾಣಿಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಈರೇಶಿ ಅಭಿಪ್ರಾಯಪಟ್ಟರು. ಶಿಕ್ಷಣ ಕ್ಷೇತ್ರಕ್ಕೆ ದೇಶದ ಜಿಡಿಪಿಯ ಶೇ.6 ಅನುದಾನ ಮೀಸಲಿರಿಸಬೇಕಿತ್ತು. ದುರದೃಷ್ಟ್ಟವೆಂದರೆ ಶೇ.3 ಸಹ ಕೊಡುತ್ತಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ವಿನಿಯೋಗಿಸುತ್ತಿರುವ ಅನುದಾನವನ್ನು ಖರ್ಚು ಎಂದು ಭಾವಿಸಬಾರದು. ಅದನ್ನು ದೇಶದ ಭವಿಷ್ಯದ ದೃಷ್ಟಿಯಿಂದ ಹೂಡಿಕೆ ಎಂಬುದಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ಗೌರವ ಡಾಕ್ಟರೇಟ್ ಪ್ರದಾನ
ನಾಟಕ, ಜಾನಪದ ಕ್ಷೇತ್ರದ ಸಾಧಕ ಬಿ.ವಿ.ವೆಂಕಟಗಿರಿಯಪ್ಪ, ವೈದ್ಯಕಿಯ ಶಿಕ್ಷಣ ಮತ್ತು ಸಾಮಾಜಿಕ ಸೇವಾ ಕ್ಷೇತ್ರ ಸಾಧಕಿ ಡಿ.ಎ.ಕಲ್ಪಜಾ ಹಾಗೂ ವಾಸ್ತುಶಿಲ್ಪ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದ ಸಾಧಕ ಪ್ರೊ.ಕೆ.ಎಸ್.ಅನಂತ ಕೃಷ್ಣ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಹಾಗೂ ವಿವಿಧ ವಿಭಾಗಗಳಲ್ಲಿ ರ್ಯಾಂಕ್ ಗಳಿಸಿರುವ 44 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಸ್ನಾತಕ ವಿಭಾಗದಲ್ಲಿ 20,784, ಸ್ನಾತಕೋತ್ತರ ವಿಭಾಗದಲ್ಲಿ 3,017, ಬಿ.ಇಡಿ ಹಾಗೂ ಬಿಪಿ.ಇಡಿ ವಿಭಾಗದಲ್ಲಿ 1,813 ಹಾಗೂ ಸ್ವಾಯತ್ತ ಕಾಲೇಜುಗಳ 3,538 ಅಭ್ಯರ್ಥಿಗಳು ಸೇರಿ ಒಟ್ಟಾರೆ 29,152 ವಿದ್ಯಾರ್ಥಿಗಳು ವಿವಿಧ ಪದವಿ ಪಡೆದರು.