ಬೆಂಗಳೂರು: ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚುರೂಪಿಸಿದ್ದ ಐವರು ಶಂಕಿತ ಉಗ್ರರ ಪ್ರಕರಣ ಸಂಬಂಧ ಸಿಸಿಬಿ ಅಧಿಕಾರಿಗಳ ತನಿಖೆಯಲ್ಲಿ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ರೂವಾರಿ ಲಷ್ಕರ್-ಎ-ತಯ್ಬ (ಎಲ್‌ಇಟಿ) ಸದಸ್ಯ ಕೇರಳದ ಟಿ.ನಾಸೀರ್, ಕೃತ್ಯಗಳು ಮತ್ತಷ್ಟು ಬಯಲಾಗಿವೆ. ಹಿಂದು ಮತ್ತು ಕ್ರೈಸ್ತ ಕೈದಿಗಳಿಗೆ ಹಣದ ಆಸೆ ತೋರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದು, ಇದಕ್ಕಾಗಿ ಹೊರಗಡೆಯಿಂದ ಆಪ್ತರ ಮೂಲಕ ಜೈಲಿಗೆ ಹಣ ತರಿಸಿಕೊಳ್ಳುತ್ತಿದ್ದ ಕೃತ್ಯಗಳು ಸಿಸಿಬಿ ತನಿಖೆ ವೇಳೆ ಬಯಲಾಗಿವೆ.
2017ರಲ್ಲಿ ಆರ್.ಟಿ.ನಗರ ಸುಲ್ತಾನ್‌ಪಾಳ್ಯದ ಕನಕನಗರ ನಿವಾಸಿ ಜುನೇದ್ ಅಹಮದ್ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ 20 ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರುತ್ತಿದಂತೆ ಜುನೇದ್ ಸೇರಿ ಆರು ಶಂಕಿತರಿಗೆ ಉಗ್ರವಾದ ಬೋಧನೆ ಮಾಡಿದ್ದ ನಾಸೀರ್, ಇವರ ಮೂಲಕ ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯ ಎಸಗಲು ಸಂಚುರೂಪಿಸಿದ್ದ.
ಕೇಸಿನಲ್ಲಿ ಐವರನ್ನು ಬಂಧಿಸಿದ್ದ ಸಿಸಿಬಿ ಅಧಿಕಾರಿಗಳು, ಜೈಲಿನಲ್ಲಿದ್ದ ಉಗ್ರ ಟಿ.ನಾಸೀರ್‌ನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹಣ ತರಿಸಿಕೊಳ್ಳುತ್ತಿದ್ದ ಮಾರ್ಗ ಸಹ ತಿಳಿದಿದೆ.
ಶಿಕ್ಷಾ ಕೈದಿ ನಾಸೀರ್, ದಿನ ಬಳಕೆ ವಸ್ತುಗಳ ಖರೀದಿಗೆ ಅವಕಾಶ ಇತ್ತು. ಇದಕ್ಕೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸಮೀಪದ ಜನರಲ್ ಸ್ಟೋರ್‌ನಲ್ಲಿ ವಸ್ತುಗಳನ್ನು ಖರೀದಿ ಮಾಡುತ್ತಿದ್ದ. ಇದೇ ನೆಪದಲ್ಲಿ ನಾಸೀರ್, ತನ್ನ ಆಪ್ತರಿಂದ ಲಕ್ಷಾಂತರ ರೂ.ನ್ನು ಜನರಲ್ ಸ್ಟೋರ್ ಮಾಲೀಕನಿಗೆ ಕೊಡಿಸುತ್ತಿದ್ದ. ನಂತರ ಅಂಗಡಿ ಮಾಲೀಕನಿಂದ ಕಳ್ಳ ಮಾರ್ಗದಲ್ಲಿ ಹಣವನ್ನು ನಾಸೀರ್ ಸ್ವೀಕರಿಸಿ ಜೈಲಿನ ಒಳಗೆ ಅಕ್ರಮ ಚಟುವಟಿಕೆಗಳಿಗೆ ಬಳಸುತ್ತಿದ್ದ.
ಕಮಿಷನ್ ಆಸೆಗಾಗಿ ಸಹಕರಿಸಿದ ಜನರಲ್ ಸ್ಟೋರ್ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದು, ನ್ಯಾಯಾಲಯದ 164 ಅಡಿಯಲ್ಲಿ ಹೇಳಿಕೆ ದಾಖಲಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಜುನೇದ್ ಅಹಮದ್ ಅರಬ್ ದೇಶದಲ್ಲಿರುವುದು ಖಚಿತವಾಗಿದ್ದು, ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ. ಇನ್ನೂ ಬಂಧಿತ ಐವರು ಶಂಕಿತರ ಬಳಿ ಸಿಕ್ಕ ಗ್ರೆನೇಡ್‌ಗಳನ್ನು ಕೊಟ್ಟವರ ಬಗ್ಗೆಯೂ ಮಾಹಿತಿ ಲಭ್ಯವಾಗಿದ್ದು, ಆತ ಸಹ ವಿದೇಶಕ್ಕೆ ಹಾರಿರುವ ಅನುಮಾನ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.