ನ್ಯೂಸ್

ಗ್ರಾಮ ಸಹಾಯಕರಿಗೆ ಇಡುಗಂಟು: ಸಚಿವ ಎಚ್.ಕೆ.ಪಾಟೀಲ | Cabinet fulfill the demand

ಬೆಂಗಳೂರು: ಗ್ರಾಮೀಣ ಜನರ ಬದುಕು-ಬವಣೆಯೊಂದಿಗೆ ತಮ್ಮನ್ನು ಜೋಡಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರಿಗೆ ಅಂಗನವಾಡಿ ಕಾರ್ಯಕರ್ತೆಯರ ಮಾದರಿಯಲ್ಲಿ ಸೇವೆಯಿಂದ ವಯೋನಿವೃತ್ತರಾದ ನಂತರ ಐದು ಲಕ್ಷ ರೂ. ಇಡುಗಂಟು ನೀಡಲು ಸಚಿವ ಸಂಪುಟ ಸಭೆ ಗುರುವಾರ ಅನುಮತಿ ನೀಡಿದೆ.

ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ 10,450 ಗ್ರಾಮ ಸಹಾಯಕರು ಈ ನಿರ್ಧಾರ ಪ್ರಯೋಜನ ಪಡೆಯಲಿದ್ದು, ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ನಂತರ ಸುದ್ದಿಗಾರರಿಗೆ ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

ಗ್ರಾಮಮಟ್ಟದ ಕಂದಾಯ-ಕೃಷಿ ಎರಡು ಇಲಾಖೆಗಳ ಕೆಲಸ ನಿರ್ವಹಿಸುವ ಗ್ರಾಮ ಸಹಾಯಕರು ಮಾಸಿಕ 27 ಸಾವಿರ ರೂ. ವೇತನಕ್ಕೆ ಈವರೆಗೆ ತೃಪ್ತರಾಗಿದ್ದರು. ಇಡುಗಂಟು ಲಭಿಸುತ್ತಿರುವ ಕಾರಣ ನಿವೃತ್ತಿ ನಂತರ ಜೀವನಭದ್ರತೆ ದೊರೆತಿದೆ.

ಕೇಂದ್ರದ ಮಾದರಿ ಕ್ರಮ

ಉದ್ಯಮ-ವಹಿವಾಟು ಕಟ್ಟಡಗಳ ಮಾಲೀಕರು ಹಾಗೂ ಬಾಡಿಗೆದಾರರ ಹಿತರಕ್ಷಣೆಯೊಂದಿಗೆ ಕರ್ನಾಟಕ ಬಾಡಿಗೆ ಅಧಿನಿಯಮ ತರ್ಕಬದ್ಧಗೊಳಿಸಲು ಸಚಿವ ಸಂಪುಟ ತೀರ್ಮಾನಿಸಿದೆ.

ಕರ್ನಾಟಕ ಬಾಡಿಗೆ ಅಧಿನಿಯಮ, 1999ರ ವಿವಿಧ ಕಲಂಗಳಿಗೆ ತಿದ್ದುಪಡಿ ತಂದು, ಸರಳೀಕರಣ ಮಾಡಲು ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರದ ಬಾಡಿಗೆ ಅಧಿನಿಯಮ ಸರಳವಾಗಿದ್ದು, ಅದೇ ಮಾದರಿ ಅನುಸರಿಸುವ ಉದ್ದೇಶದಿಂದ ದಂಡ ಮತ್ತು ಅಪರಾಧ ನಿಬಂಧನೆಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ ವಿವರಿಸಿದರು.