ಬೆಂಗಳೂರು: ಕೇಂದ್ರದ ಹದಿನಾರನೇ ಹಣಕಾಸು ಆಯೋಗ ಆಗಸ್ಟ್ 28ರಿಂದ ಮೂರು ದಿನ ರಾಜ್ಯದಲ್ಲಿ ಅಹವಾಲು ಸ್ವೀಕರಿಸಲಿದೆ.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನ ಬೇಡಿಕೆ ಮಂಡಿಸಲು ತಯಾರಿ ನಡೆಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹಣಕಾಸು ಇಲಾಖೆ ಜತೆ ಸಮಾಲೋಚನೆ ನಡೆಸಿ ಸಲ್ಲಿಸಬೇಕಾದ ಪ್ರಸ್ತಾವನೆ ಕುರಿತು ಮಾರ್ಗದರ್ಶನ ಮಾಡಿದರು.
ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಕರೆದ ಸಭೆಯ ನೇತೃತ್ವ ವಹಿಸಿದ್ದ ಸಿಎಂ, ಬಹು ಮುಖ್ಯವಾಗಿ 15ನೇ ಹಣಕಾಸು ಆಯೋಗದ ವರದಿ ಅನುಷ್ಠಾನ ಸಂದರ್ಭದಲ್ಲಿ ರಾಜ್ಯಕ್ಕಾದ ನಷ್ಟ, ಅದರ ಪರಿಣಾಮ, ಮುಂದೆ ನಮ್ಮ ಬೇಡಿಕೆ ಏನಾಗಬೇಕೆಂಬ ಬಗ್ಗೆ ವಿಷಯ ಪ್ರಸ್ತಾಪಿದರು.
15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ 11,495 ಕೋಟಿ ವಿಶೇಷ ಅನುದಾನವನ್ನು ಕರ್ನಾಟಕಕ್ಕೆ ನೀಡಿಲ್ಲ. ಒಟ್ಟಾರೆಯಾಗಿ, ಕರ್ನಾಟಕವು ಒಟ್ಟು 73,593 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದೆ ಎಂಬ ವಾದವನ್ನು ಎತ್ತಿ ತೋರಿಸಲು ನಿರ್ಧರಿಸಲಾಯಿತು.
ಮಹಾರಾಷ್ಟ್ರದ ನಂತರ ಕರ್ನಾಟಕವು ಎರಡನೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯವಾಗಿದೆ. ತೆರಿಗೆ ಆದಾಯದಲ್ಲಿ ರಾಜ್ಯವು 4.30 ಲಕ್ಷ ಕೋಟಿ ರೂ. ಇದ್ದರೂ ರಾಜ್ಯಕ್ಕೆ ಪ್ರತಿ 100 ರೂಪಾಯಿ ತೆರಿಗೆಯಲ್ಲಿ ಕೇವಲ 12-13 ರೂಪಾಯಿ ಮಾತ್ರ ಸಿಗುತ್ತಿದೆ, ಬೇರೆ ರಾಜ್ಯಗಳಿಗೆ ಪಾಲು ಹೆಚ್ಚಿಸಿ ನಮಗೆ ಕಡಿತ ಮಾಡುವುದು ಸರಿಯಲ್ಲ ಎಂದು ಬಲವಾದ ಪ್ರತಿಪಾದನೆ ಮಾಡಲು ತೀರ್ಮಾನಿಸಲಾಯಿತು.
ಕೇಂದ್ರ ತೆರಿಗೆಯಲ್ಲಿ ಕರ್ನಾಟಕದ ಪಾಲು 14 ನೇ ಹಣಕಾಸು ಆಯೋಗದ ಅಡಿಯಲ್ಲಿ ಶೇ.4.71 ರಿಂದ 15 ನೇ ಹಣಕಾಸು ಆಯೋಗದ ಅಡಿಯಲ್ಲಿ ಶೇ.3.64ಕ್ಕೆ ಇಳಿದಿದೆ. ಈ ಇಳಿಕೆಯಿಂದಾಗಿ 62,098 ಕೋಟಿ ರೂಪಾಯಿ ನಷ್ಟವಾಗಿದೆ. ಈ ರೀತಿ ಇಳಿಕೆ ಮಾಡುವುದು ಸರಿಯಲ್ಲ, ಹೀಗೆ ಮಾಡುವುದರಿಂದ ಆಗುವ ಅಡ್ಡ ಪರಿಣಾಮದ ಬಗ್ಗೆ ತಿಳಿಸಿಕೊಡಲು ಅಭಿಪ್ರಾಯ ವ್ಯಕ್ತವಾಯಿತು.
ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ನಮಗೆ 15ನೇ ಹಣಕಾಸು ಯೋಜನೆಯಲ್ಲಿ ಏನೆಲ್ಲಾ ಅನ್ಯಾಯವಾಗಿದೆ ಎಂಬುದನ್ನು ಚರ್ಚಿಸಿದ್ದೇವೆ. ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ವಿವರಣೆ ನೀಡಬೇಕೆಂದು ನಿರ್ಧರಿಸಲಾಗಿದೆ. ಹಾಗೆಯೇ, ಮುಂದೆ ನಮ್ಮ ರಾಜ್ಯಕ್ಕೆ ನಿಗದಿಪಡಿಸಿದ ಹಣ ಬರಬೇಕು, ಈ ಬಗ್ಗೆ 16ನೇ ಹಣಕಾಸು ಆಯೋಗಕ್ಕೆ ಮನವಿ ಮಾಡುತ್ತೇವೆ ಎಂದರು.
15ನೇ ಹಣಕಾಸು ಆಯೋಗ ಶಿಫಾರಸ್ಸಿನಂತೆ ಕರ್ನಾಟಕಕ್ಕೆ 11,500 ಕೋಟಿ ಬರಬೇಕಿತ್ತು, ಆದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್‌ನಲ್ಲಿ ಹಣ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ, ಆದರೆ, ಅವರು ವಾಸ್ತವವಾಗಿ ಕೊಟ್ಟಿಲ್ಲ. ಅವರು ಡಬಲ್ ಸ್ಟಾಂಡ್ ಹೊಂದಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಹಣಕಾಸು ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್, ಕಾರ್ಯದರ್ಶಿ ಜಾರ್ ಸೇರಿ ಹಿರಿಯ ಅಧಿಕಾರಿಗಳಿದ್ದರು.